ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.11ರಿಂದ ರಾಜ್ಯದ ಸಂಸದರ ಮನೆ ಮುಂದೆ ಅಂಗನವಾಡಿ ಕಾರ್ಯಕರ್ತರ ಧರಣಿ
ಅಂಗನವಾಡಿ ನೌಕರರ ಸಂಘದಿಂದ ಎಚ್ಚರಿಕೆ

ಬೆಂಗಳೂರು, ಜು.6: ನ್ಯಾಯಾಲಯದ ಆದೇಶದಂತೆ ರಾಜ್ಯ ಸರಕಾರವು ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಚುಟಿ ಪಾವತಿ ಮಾಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಜು.11ರಂದು ರಾಜ್ಯದ ಎಲ್ಲಾ ಸಂಸದರ ಮನೆ ಮುಂದೆ ಧರಣಿ ನಡೆಸಲಾಗುವುದು. ಜು.26ರಿಂದ ದೆಹಲಿಯ ಪಾರ್ಲಿಮೆಂಟ್ ಎದುರು ಅನಿರ್ದಿಷ್ಟಾವಧಿ ಧರಣಿಯನ್ನು ಮಾಡಲಿದ್ದೇವೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಎಚ್ಚರಿಕೆ ನೀಡಿದೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಸುನಂದ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತರು ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅನೇಕ ಸರಕಾರಿ ಯೋಜನೆಗಳನ್ನು ಅನುಷ್ಠಾನ ಮಾಡಿ ನೆರವಾಗುತ್ತದೆ. ಕೊರೋನ ಸಮಯದಲ್ಲೂ ಜೀವದ ಹಂಗನ್ನು ಬಿಟ್ಟು ಸಮಾಜಕ್ಕೆ ದುಡಿದಿದ್ದಾರೆ. ಆದರೆ ಸರಕಾರದಿಂದ ಯಾವುದೇ ನೆರವು ಅಂಗನವಾಡಿ ಕಾರ್ಯಕರ್ತರಿಗೆ ಸಿಗಲಿಲ್ಲ. ಆರ್ಥಿಕವಾಗಿ ಹಿಂದುಳಿದ ಕಾರ್ಯಕರ್ತರಿಗೆ ಗ್ರಾಚುಟಿ ಕೊಡಲು ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ, ಇಲ್ಲಿಯವರೆಗೂ ಅದನ್ನು ರಾಜ್ಯ ಸರಕಾರ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತರರಿಗೆ ಕೆಲಸದ ಅಭದ್ರತೆ ಇದೆ. ಸರಕಾರವು ಅವರಿಗೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಿದರೂ 55 ವರ್ಷಗಳಾದ ಸುಮಾರು ಕಾರ್ಯಕರ್ತರಿಗೆ ಆ ಸೌಲಭ್ಯ ಸಿಗದೇ ಅನೇಕ ಮಂದಿ ತೀರಿಹೋಗಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಗೋಷ್ಠಿಯಲ್ಲಿ ಸುಮಿತ್ರ, ನಾಗಲಕ್ಷ್ಮಿ, ಭಾಗ್ಯ, ಲೀಲಾವತಿ ಉಪಸ್ಥಿತರಿದ್ದರು.





