ಮಳೆ ಹಾನಿ ಪ್ರದೇಶಗಳಲ್ಲಿ ತುರ್ತು ಕ್ರಮಕ್ಕೆ ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು,ಜು.6: ಭೂಕಂಪ, ಭೂ ಕುಸಿತ ಮತ್ತು ಮಳೆ ಹಾನಿಯಿಂದ ತತ್ತರಿಸುತ್ತಿರುವ ಮಡಿಕೇರಿ ಮತ್ತಿತರ ಜಿಲ್ಲೆಗಳಲ್ಲಿ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 10 ಕೋಟಿಯಷ್ಟು ಹಣ ಇದೆ. ತಕ್ಷಣ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಹೇಳಿದ್ದೇವೆ. ಕಾರವಾರ ಜಿಲ್ಲಾಧಿಕಾರಿಗಳ ಬಳಿ 45 ಕೋಟಿ ಇದೆ. ಅಗತ್ಯ ಬಿದ್ದಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡಲಾಗುವುದು ಎಂದರು.
ಉಡುಪಿ ಮತ್ತಿತರ ಕಡೆ ಕಡಲ್ಕೊರೆತ ಉಂಟಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಹಲವಾರು ಸಂಸ್ಥೆಗಳು ಮುಂದೆ ಬಂದಿವೆ. ಈ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಉತ್ತರ ಕರ್ನಾಟಕದ 60 ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಮತ್ತು ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡಲಾಗಿತ್ತು. ಆದರೆ, ಪ್ರವಾಹ ಕಡಿಮೆಯಾಗುತ್ತಿದ್ದಂತೆ ಜನರು ಮತ್ತೆ ತಮ್ಮ ಹಳೆಯ ಮನೆಗಳಿಗೆ ವಾಪಸ್ಸಾಗುತ್ತಾರೆ ಏನು ಮಾಡುವುದು ಹೇಳಿ ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಯೂನಿಫಾರಂ ಒದಗಿಸಲು ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಿಕ್ಷಣ ಸಚಿವ ನಾಗೇಶ್ ಅವರು ಇದನ್ನು ನೋಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಇದನ್ನು ಒದಗಿಸುತ್ತೇವೆ ಎಂದರು.
ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಹರ್ಷವರ್ಧನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.









