ಉಡುಪಿ ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮನೆಗಳಿಗೆ ಹಾನಿ; 15 ಲಕ್ಷ ರೂ. ನಷ್ಟ
ಹೆಬ್ರಿಯ ಅನೇಕ ಕಡೆಗಳಲ್ಲಿ ಭತ್ತದ ನೇಜಿ ನಾಶದ ಭೀತಿ

ಉಡುಪಿ: ಕಳೆದೆರಡು ದಿನಗಳ ಸತತ ಮಳೆ ಹಾಗೂ ಗಾಳಿಯಿಂದ ಉಡುಪಿ ಜಿಲ್ಲೆಯಾದ್ಯಂತ 30ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಹೆಬ್ರಿ ತಾಲೂಕಿನ ಅನೇಕ ಗ್ರಾಮಗಳ ಗದ್ದೆಗಳಲ್ಲಿ ನೀರು ನಿಂತು ವ್ಯಾಪಕವಾಗಿ ಭತ್ತದ ನೇಜಿ ನಾಶವಾಗಿರುವ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಬ್ರಿಯ ವರಂಗ, ಶಿವಪುರ, ಅಂಡಾರು, ಬೇಳಂಜೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದ ರೈತರು ತಡವಾಗಿ ಭಿತ್ತನೆ ಮಾಡಿದ ಬೀಜ ಮೊಳಕೆಯೊಡೆಯುವ ಸಮಯದಲ್ಲೇ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿರುವ ಬಗ್ಗೆ ರೈತರು ಭೀತಿಯನ್ನು ವ್ಯಕ್ತಪಡಿಸುತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಎಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂಬ ಸರಿಯಾದ ಮಾಹಿತಿ ಇನ್ನೂ ಸಿಕ್ಕಿಲ್ಲ.
ಈ ಬಗ್ಗೆ ಹೆಬ್ರಿಯ ತಹಶೀಲ್ದಾರ್ ಪುರಂದರ ಕೆ. ಅವರನ್ನು ವಿಚಾರಿಸಿದಾಗ, ಹೆಬ್ರಿಯ ಅನೇಕ ಗ್ರಾಮಗಳ ಗದ್ದೆ ಗಳಲ್ಲಿ ನೀರು ಇನ್ನೂ ನಿಂತುಕೊಂಡಿದೆ. ಹೀಗಾಗಿ ನಷ್ಟದ ಅಂದಾಜು ಇನ್ನೂ ಮಾಡಲಾಗಿಲ್ಲ. ನೀರು ಇಳಿದು ಹೋದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಹಾನಿಯ ಹಾಗೂ ನಷ್ಟದ ಪ್ರಮಾಣವನ್ನು ಖಚಿತವಾಗಿ ಹೇಳಬಹುದಾಗಿದೆ ಎಂದರು.
ಅಂಡಾರು ಗ್ರಾಮದ ಲಲಿತಾ, ರಾಜೇಂದ್ರ, ಜಗನ್ನಾಥ ಹಾಗೂ ನಾರಾಯಣ ಶೆಟ್ಟಿಗಾರ್, ರಾಜಶೇಖರ್ ಸೇರ್ವೆಗಾರ್, ಕಲ್ಯಾಣಿ ಪೂಜಾರ್ತಿ, ವರಂಗದ ನಾಗಪ್ರ ಶೆಟ್ಟಿಗಾರ್, ಪಡುಕುಡೂರಿನ ರವೀಂದ್ರ ಶೆಟ್ಟಿ, ಗುಲಾಬಿ ಶೆಟ್ಟಿ, ದೇಜು ಪೂಜಾರಿ, ಅಮರನಾಥ ಶೆಟ್ಟಿ, ಕುಡಿಬೈಲಿನ ಅಣ್ಣ.ಯ್ಯ ನಾಯ್ಕ್, ಸತೀಶ್ ಶೆಟ್ಟಿ, ಗಣೇಶ್ ಮುಂತಾದವರು ಬೀಜ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಲಕ್ಷಾಂತರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಳೆದ 24 ಗಂಟೆಗಳ ಅಂತರದಲ್ಲಿ ಜಿಲ್ಲೆಯಲ್ಲಿ ಸುಮಾರು 30 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿದ್ದು, ಇದರಿಂದ ಒಟ್ಟು ೧೫ ಲಕ್ಷರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ. ಕುಂದಾಪುರ ತಾಲೂಕಿನಲ್ಲಿ ೧೩, ಬ್ರಹ್ಮಾವರ ತಾಲೂಕಿನ ೭,ಉಡುಪಿಯ ೫ ಹಾಗೂ ಕಾಪು ಮತ್ತು ಬೈಂದೂರು ಗಳಲ್ಲಿ ತಲಾ ಎರಡು ಮನೆಗಳಿಗೆ ಹಾನಿಯಾಗಿರುವ ಮಾಹಿತಿ ಜಿಲ್ಲಾ ಕಂಟ್ರೋಲ್ ರೂಮಿಗೆ ಬಂದಿದೆ.
ಉಡುಪಿ ತಾಲೂಕಿನಲ್ಲಿ ಪುತ್ತೂರು ಗ್ರಾಮದ ರಾಘು ಪೂಜಾರಿ ಮನೆ ಮೇಲೆ ಮರಬಿದ್ದು ೫೦ಸಾವಿರ ರೂ., ಶೇಷಗಿರಿ ನಾಯಕ್ ಇವರ ಮನೆಯ ಮಣ್ಣಿನ ಗೋಡೆ ಕುಸಿದು 40 ಸಾವಿರ, ಮೂಡನಿಡಂಬೂರಿನ ವನಜ ಶೆಟ್ಟಿ ಹಾಗೂ ಬಡಾ ನಿಡಿಯೂರಿನ ವಾಸು ಪೂಜಾರಿ ಇವರ ಮನೆಗಳಿಗೆ ಹಾನಿಯಾಗಿ ತಲಾ ೫೦ ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಹೊಸೂರಿನ ಈರಾ ಎಂಬವರ ವಾಸ್ತವ್ಯದ ಪಕ್ಕಾ ಮನೆ ಮಳೆಗೆ ಕುಸಿದಿದ್ದು ಒಂದು ಲಕ್ಷ ರೂ.ನಷ್ಟವಾಗಿದೆ. ಉಳಿದಂತೆ ಕಾವಡಿಯ ಸರಸ್ವತಿ ಕುಲಾಲ್‌ರ ಮನೆಗೆ ೪೦ ಸಾವಿರ, ಮೂಡುಹಡು ಗ್ರಾಮದ ಗೀತಾ ಮರಕಾಲ್ತಿ ಮನೆಗೆ 35 ಸಾವಿರ, ಗಿಳಿಯಾರು ಜಯಲಕ್ಷ್ಮೀ ಮನೆಗೆ ೨೫ ಸಾವಿರ ರೂ. ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿವೆ.
ಕುಂದಾಪುರ ತಾಲೂಕ ಗಂಗೊಳ್ಳಿಯ ಸಫೀಯರ ಮನೆಗೆ ೬೦ ಸಾವಿರ, ದೇವದಾಸ ಖಾರ್ವಿ ಮನೆಗೆ ೩೦ಸಾವಿರ, ಬಸ್ರೂರಿನ ರಾಘವೇಂದ್ರ ಮನೆಗೆ ೪೦ ಸಾವಿರ, ಯಡ್ಯಾಡಿಯ ಪದ್ದು ಮೊಗೇರ್ತಿ ಮನೆಗೆ ೭೦ ಸಾವಿರ, ಕುಳುಂಜೆ ಯಶೋಧ ಶೆಡ್ತಿ ಮನೆಗೆ ೪೦ ಸಾವಿರ, ಕೊರ್ಗಿಯ ಚಿತ್ರಾ, ಸಿದ್ಧಾಪುರದ ಸಾದಮ್ಮ ಶೆಡ್ತಿ ಮನೆಗೆ ತಲಾ ೫೦ ಸಾವಿರ,ಹೆಮ್ಮಾಡಿ ಯೂಸೂಫ್‌ರ ಮನೆಗೆ ೬೫ಸಾವಿರ ರೂ.ನಷ್ಟವಾಗಿದೆ.
ಕಾಪು ತಾಲೂಕಿನ ಕೋಟೆ ಗ್ರಾಮದ ಶಿವ ಹಾಗೂ ಕಳತ್ತೂರು ಗ್ರಾಮದ ಸುಮತಿ ಶೆಟ್ಟಿಗಾರ್ ಮನೆಗೆ ಭಾಗಶ: ಹಾನಿಯಿಂದ ತಲಾ ೩೦ಸಾವಿರ ರೂ. ನಷ್ಟವಾಗಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮದ ನೇಜಿ ಹಸನ್ ಮನೆಗೆ ೭೫,೦೦೦ ಹಾಗೂಬ ನಾವುಂದದ ಕತಿಜಾ ಬೆನ್ ಮನೆಗೆ ೫೦ ಸಾವಿರ ರೂ. ನಷ್ಟವಾಗಿರುವ ಮಾಹಿತಿ ಇಲ್ಲಿಗೆ ಬಂದಿದೆ.