ಜು.10-11ರಂದು ‘ವಿಶ್ವಾರ್ಪಣಮ್’-ಗುರುವಂದನೆ ಕಾರ್ಯಕ್ರಮ
ಉಡುಪಿ, ಜು.೬: ಅದಮಾರು ಮಠದ ೩೨ನೆ ಯತಿ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರಿಗೆ ಗುರುವಂದನೆ ಹಾಗೂ ‘ವಿಶ್ವಾರ್ಪಣಮ್’ ಕಾರ್ಯಕ್ರಮ ವನ್ನು ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಉಡುಪಿ ಅದಮಾರು ಮಠದ ಗೆಸ್ಟ್‌ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಸೇವಾ ಬಳಗದ ಡಾ.ಜಗದೀಶ್ ಶೆಟ್ಟಿ ಈ ಕುರಿತು ಮಾಹಿತಿ ನೀಡಿದರು. ಜು.೧೦ರಂದು ಸಂಜೆ ೪ಗಂಟೆಗೆ ವಿಶ್ವಾರ್ಪಣಮ್ ಹಾಗೂ ಜು.೧೧ರಂದು ಸಂಜೆ ೪.೩೦ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಅದಮಾರು ಮಠಾಧೀಶ ಶ್ರೀಈಶ ಪ್ರಿಯತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀನಿವಾಸ ಆಚಾರ್ಯ ಕರ್ನೂಲು ಅಭಿನಂದನಾ ಭಾಷಣ ಮಾಡಲಿರುವರು. ಇದೇ ಸಂದರ್ಭದಲ್ಲಿ ‘ಕೃಷ್ಣಪ್ರಿಯ- ವಿಶ್ವಪ್ರಿಯ’ ಪುಸ್ತಕ ಹಾಗೂ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ ‘ವಿಶ್ವಪ್ರಿಯ ಈಶಪ್ರಿಯ’ ಬಿಡುಗಡೆಯಾಗಲಿದೆ. ಪೆರವೋಡಿ ನಾರಾಯಣ ಭಟ್ ಅವರಿಗೆ ಶ್ರೀನರಹರಿತೀರ್ಥ ಪ್ರಶಸ್ತಿ ಪ್ರದಾನ ಮಾಡಲಾಗು ವುದು. ಬಳಿಕ ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿಶ್ವಾರ್ಪಣಮ್‌ನಲ್ಲಿ ಪಾಂಡಿಚೇರಿ ಋಷಿಧರ್ಮ ಫೌಂಡೇಶನ್ ಅಧ್ಯಕ್ಷ ಡಿ.ಎ.ಜೋಸೆಫ್ ಅವರಿಂದ ವ್ಯಕ್ತಿತ್ವ ವಿಕಸನ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರದಿಂದ ಜಟಾಯು ಮೋಕ್ಷ ಯಕ್ಷಗಾನ ತುಣುಕು ಪ್ರದರ್ಶನ ಜರಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಸಂಚಾಲಕ ರಾಘವೇಂದ್ರ ರಾವ್, ಓಂಪ್ರಕಾಶ ಭಟ್, ಪುರುಷೋತ್ತಮ ಅಡ್ವೆ, ಗೋವಿಂದರಾಜ್ ಉಪಸ್ಥಿತರಿದ್ದರು.