ಕಡಲ್ಕೊರೆತ ಸಮಸ್ಯೆಗೆ ಶ್ವಾಶತ ಪರಿಹಾರಕ್ಕೆ ಯೋಜನೆ; ಉಳ್ಳಾಲ, ಮರವಂತೆಯಲ್ಲಿ ಪ್ರಾಯೋಗಿಕ ಕಾಮಗಾರಿ: ಸಚಿವ ಅಂಗಾರ

ಉಡುಪಿ : ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿನ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಉಳ್ಳಾಲದ ಉಚ್ಚಿಲ ಬಟಪಾಡಿ ಹಾಗೂ ಬೈಂದೂರಿನ ಮರವಂತೆಯಲ್ಲಿ ಹೊಸ ತಂತ್ರಜ್ಞಾನ ದೊಂದಿಗೆ ಪ್ರಾಯೋಗಿಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಮೀನುಗಾರಿಕೆ ಹಾಗೂ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಉಡುಪಿ ಜಿಪಂ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸೂಚನೆಯಂತೆ ಕಾಸರಗೋಡು ನೆಲ್ಲಿ ಕುನ್ನು ಎಂಬಲ್ಲಿ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಅನುಷ್ಠಾನ ಮಾಡಲಾದ ಸೀ ವೇವ್ ಬ್ರೇಕರ್ ತಂತ್ರಜ್ಞಾನ ಕಾಮಗಾರಿಯನ್ನು ಸ್ವತಃ ನಾನೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಅದೇ ತಂತ್ರಜ್ಞಾನವನ್ನು ಕರಾವಳಿಯಲ್ಲಿ ಅತ್ಯಂತ ಹೆಚ್ಚು ಕಡಲ್ಕೊರೆತ ಮತ್ತು ಅಲೆಗಳ ಒತ್ತಡ ಇರುವ ಉಳ್ಳಾಲದ ಉಚ್ಚಿಲ ಬಟಪಾಡಿ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುವುದು ಎಂದರು.
ಅದೇ ರೀತಿ ಬೈಂದೂರಿನ ಮರವಂತೆಯಲ್ಲಿನ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಕ್ ಫೂಟ್ ತಂತ್ರಜ್ಞಾನ ಬಳಸಿ ಕಾಮಗಾರಿಯನ್ನು ಪ್ರಾಯೋಗಿಕವಾಗಿ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಜು.೪ರಂದು ಮುಖ್ಯಮಂತ್ರಿಗೆ ಯೋಜನೆಯ ವರದಿಯನ್ನು ಸಲ್ಲಿಸಲಾಗಿದೆ. ಈ ಬಗ್ಗೆ ತಜ್ಞ ರಿಂದ ಅಭಿಪ್ರಾಯ ಪಡೆದು ವರದಿ ನೀಡುವಂತೆ ಮುಖ್ಯಮಂತ್ರಿಗಳು, ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ತುರ್ತು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಜು.೪ರಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಈ ಸಂಬಂಧ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದಕ್ಕಾಗಿ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಆಯಾ ಜಿಲ್ಲೆಗಳ ಕಡಲ್ಕೊರೆತಕ್ಕೆ ಸಂಬಂಧಿಸಿದ ವರದಿ ಯನ್ನು ಪಡೆದು ಮುಖ್ಯಮಂತ್ರಿಗೆ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಬೈಂದೂರು, ಕುಂದಾಪುರ, ಕಾಪು ಮೂಳೂರಿನ ಹಲವು ಕಡೆಗಳಲ್ಲಿ ಕಡಲು ಕೊರತೆ ತೀವ್ರವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ವರದಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮ ಗಾರಿ ನಡೆಸಲು ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಮೂರು ಜಿಲ್ಲೆಯ ಉಸ್ತುವಾರಿ ಸಚಿವರುಗಳು, ಜು.೧೦ರಂದು ಮುಖ್ಯಮಂತ್ರಿಯನ್ನು ಭೇಟಿ ಮಾಡ ಲಾಗುವುದು. ಇದೇ ವೇಳೆ ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಅನುದಾನ ಪಡೆದು ಆದಷ್ಟು ಬೇಗ ತಾತ್ಕಾಲಿಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಪಂ ಸಿಇಓ ಪ್ರಸನ್ನ ಎಚ್., ಎಸ್ಪಿ ವಿಷ್ಣು ವರ್ದನ್ ಉಪಸ್ಥಿತರಿದ್ದರು.







