ಮಾಂಸ ಅಕ್ರಮ ಮಾರಾಟ ಪ್ರಕರಣ; ಕೃತ್ಯಕ್ಕೆ ಬಳಸಿದ್ದ ಶೆಡ್, ಸಲಕರಣೆ ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರ ಮನವಿ
ಜು.12ರಂದು ವಿಚಾರಣೆಗೆ ಹಾಜರಾಗಲು ಆರೋಪಿಗೆ ಮಂಗಳೂರು ಸಹಾಯಕ ಆಯುಕ್ತ ನೋಟಿಸ್

ಮಂಗಳೂರು : ಅರ್ಕುಳ ಗ್ರಾಮದ ಅರ್ಕುಳ ಕೋಟೆ ಎಂಬಲ್ಲಿ ಪರವಾನಿಗೆ ಇಲ್ಲದೆ ದನವನ್ನು ಕಡಿದು ಮಾಂಸ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಜು.12ರಂದು ಅಪರಾಹ್ನ 3ಕ್ಕೆ ವಿಚಾರಣೆಗೆ ಹಾಜರಾಗಲು ಸಹಾಯಕ ಆಯುಕ್ತರು ಆರೋಪಿ ಬಾತಿಶ್‌ಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಆರೋಪಿಯು ಎ.ಕೆ. ಖಾಲಿದ್ ಎಂಬವರಿಗೆ ಸೇರಿದ ಮನೆಗೆ ತಾಗಿಕೊಂಡಿರುವ ಶೆಡ್‌ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸರು ಜು.೩ರಂದು ದಾಳಿ ನಡೆಸಿದ್ದರು. ಅಲ್ಲದೆ ೯೫ ಕೆ.ಜಿ. ಜಾನುವಾರುಗಳ ಮಾಂಸ, ಸ್ಥಳಗಳಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಯು ಪರವಾನಿಗೆ ಇಲ್ಲದೆ ಜಾನುವಾರು ವಧೆ ಮಾಡಿದ ಕಾರಣ ಕೃತ್ಯಕ್ಕೆ ಬಳಸಿದ್ದ ಶೆಡ್ ಮತ್ತು ಈ ಎಲ್ಲಾ ಸಲಕರಣೆಗಳ ಮುಟ್ಟುಗೋಲು ಹಾಕಿಕೊಳ್ಳಲು ಮಂಗಳೂರು ಗ್ರಾಮಾಂತರ ಠಾಣೆಯ ಎಸ್ಸೈ ಮಂಗಳೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಮಂಗಳೂರು ಸಹಾಯಕ ಆಯುಕ್ತರು ಮತ್ತು ಉಪವಿಭಾಗ ದಂಡಾಧಿಕಾರಿಯು ಕೃತ್ಯಕ್ಕೆ ಬಳಸಿದ ಶೆಡ್ ಮತ್ತು ಸಲಕರಣೆಗಳನ್ನು ಯಾಕೆ ಮುಟ್ಟುಗೋಲು ಹಾಕಬಾರದು ಎಂಬ ಬಗ್ಗೆ ವಿಚಾರಣೆ ನಡೆಸಲು ಜೂ.೧೨ರಂದು ಹಾಜರಾಗಲು ನೋಟಿಸ್ ಜಾರಿಗೊಳಿಸಿದ್ದಾರೆ. ಜೂ.೧೨ರಂದು ಸ್ವತಃ ಆರೋಪಿ ಅಥವಾ ಅಧಿಕೃತ ಪ್ರತಿನಿಧಿ ಅಥವಾ ವಕೀಲರ ಮೂಲಕ ವಾದ, ಆಕ್ಷೇಪಣೆಗಳನ್ನು ಸಲ್ಲಿಸುವುದು. ತಪ್ಪಿದಲ್ಲಿ ನಿಯಾಮಾನುಸಾರ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ಆಯುಕ್ತರು ತಿಳಿಸಿದ್ದಾರೆ.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ೨೦೨೦ರಡಿಯಲ್ಲಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೆ ಆರೋಪಿಯ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ. ಅಲ್ಲದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೆಡ್ ಮತ್ತು ಸಲಕರಣೆಗಳ ಮುಟ್ಟುಗೋಲು ಹಾಕಲು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ವಿಚಾರಣೆಗೆ ಜು.೧೨ರಂದು ಹಾಜರಾಗಲು ನೋಟಿಸ್ ಜಾರಿಗೊಳಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಶೆಡ್ ಯಾರದ್ದು ಎಂಬುದನ್ನು ಪರಿಶೀಲಿಸಲಾಗುವುದು. ಮುಂದಿನ ಸೂಚನೆ ಯವರೆಗೆ ಅದನ್ನು ಯಾವುದಕ್ಕೂ ಬಳಕೆ ಮಾಡು ವಂತಿಲ್ಲ ಎಂದು ತಿಳಿಸಿದ್ದಾರೆʼ.
-ಮದನ್ ಮೋಹನ್,
ಮಂಗಳೂರು ಸಹಾಯಕ ಆಯುಕ್ತ