ಸರಕಾರ ರಚನೆಗೆ ಏಕನಾಥ್ ಶಿಂಧೆಗೆ ರಾಜ್ಯಪಾಲರ ಆಹ್ವಾನ ಪ್ರಶ್ನಿಸಿ ಸುಪ್ರೀಂಕೋರ್ಟ್ ಕದ ತಟ್ಟಿದ ಉದ್ಧವ್ ಠಾಕ್ರೆ

Photo:PTI
ಮುಂಬೈ: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಏಕನಾಥ್ ಶಿಂಧೆ ಅವರನ್ನು ಆಹ್ವಾನಿಸಿದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ನಿರ್ಧಾರದ ವಿರುದ್ಧ ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದೆ.
ಠಾಕ್ರೆ ತಂಡದ ನಾಯಕ ಸುಭಾಷ್ ದೇಸಾಯಿ ಅವರು ಸೋಮವಾರದ ವಿಧಾನಸಭೆ ಕಲಾಪವನ್ನು ಪ್ರಶ್ನಿಸಿದ್ದಾರೆ. ಈ ಕಲಾಪದಲ್ಲಿ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಹುಮತವನ್ನು ಸಾಬೀತುಪಡಿಸಿದ್ದರು.
ಅನರ್ಹತೆಯ ಪ್ರಕ್ರಿಯೆ ಬಾಕಿ ಇರುವ 16 ಬಂಡಾಯ ಶಾಸಕರು ಮತದಾನದಲ್ಲಿ ಭಾಗವಹಿಸಬಾರದು ಎಂದು ಠಾಕ್ರೆ ಬಣ ವಾದಿಸಿದೆ.
ಉದ್ಧವ್ ಠಾಕ್ರೆ ಅವರ ತಂಡವು ಹೊಸ ಸ್ಪೀಕರ್ ಆಯ್ಕೆ ಮಾಡಲು ಹಾಗೂ ಬಹುಮತದ ಪರೀಕ್ಷೆಯ ವೇಳೆ ವಿಧಾನಸಭೆಯಲ್ಲಿ ಮತ ಚಲಾಯಿಸಿದ ಎಲ್ಲಾ ಬಂಡಾಯ ಶಾಸಕರ ವಿರುದ್ಧ ಹೊಸ ಅನರ್ಹತೆಯ ಪ್ರಕ್ರಿಯೆಗೆ ಮುಂದಾಗಿದೆ. ಶಿಂಧೆ ತಂಡದ ನೂತನ ಸ್ಪೀಕರ್ ರಾಹುಲ್ ನಾರ್ವೇಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದೆ. ಸುಭಾಷ್ ದೇಸಾಯಿ ಅವರು ತಮ್ಮ ಅರ್ಜಿಯಲ್ಲಿ ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧರಿಸುವಂತೆ ಕೇಳಿದ್ದಾರೆ.