ಉತ್ತರಪ್ರದೇಶದಲ್ಲಿ ದಾಖಲಾದ ಪ್ರಕರಣ: ಮುಹಮ್ಮದ್ ಝುಬೈರ್‌ಗೆ ಸುಪ್ರೀಂಕೋರ್ಟ್ ನಿಂದ ಮಧ್ಯಂತರ ಜಾಮೀನು

ಹೊಸದಿಲ್ಲಿ: ಮೂವರು ಹಿಂದುತ್ವವಾದಿ ಸಂತರನ್ನು ‘ದ್ವೇಷ ಪ್ರಚೋದಕರು' ಎಂದು ಕರೆದಿದ್ದಕ್ಕಾಗಿ ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾದ ಪ್ರಕರಣದಲ್ಲಿ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಝುಬೇರ್ ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಐದು ದಿನಗಳ ಜಾಮೀನು ನೀಡಿದೆ. ಆದರೆ ದಿಲ್ಲಿಯಲ್ಲಿ ದಾಖಲಾದ ಪ್ರಕರಣದಲ್ಲಿ ಇನ್ನೂ ಜಾಮೀನು ಸಿಗದ ಕಾರಣ ಅವರು ಸದ್ಯಕ್ಕೆ ಜೈಲಿನಲ್ಲೇ ಇರುತ್ತಾರೆ ಎಂದು NDTV ವರದಿ ಮಾಡಿದೆ.
ಜಾಮೀನು ಮಧ್ಯಂತರ ಆದೇಶವಾಗಿದ್ದು, ಐದು ದಿನಗಳ ನಂತರ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ನಡೆಸಲಿದೆ.
ಝುಬೇರ್ ಅವರು ನನಗೆ ಜೀವ ಬೆದರಿಕೆ ಎಂದು ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು . ಸೀತಾಪುರದಲ್ಲಿ ಅವರ ವಿರುದ್ಧದ ಪ್ರಕರಣವನ್ನು ತುರ್ತಾಗಿ ನಿಲ್ಲಿಸುವಂತೆ ಕೋರಿದ್ದರು.
ಎಫ್‌ಐಆರ್ ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ಜೂನ್ 10ರಂದು ನಿರಾಕರಿಸಿತ್ತು. ಹೈಕೋರ್ಟ್ ಆದೇಶವನ್ನು ಝುಬೈರ್ ಪ್ರಶ್ನಿಸಿದ್ದರು.
ಟ್ವೀಟಿಸುವುದು ಕ್ರಿಮಿನಲ್ ಅಪರಾಧವೇ. ಅವರು ಟ್ವೀಟ್ ಅನ್ನು ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು ಏಕೆ? ಅವರು ದ್ವೇಷದ ಭಾಷಣವನ್ನು ಉಲ್ಲೇಖಿಸುತ್ತಿದ್ದರು. ಅವರು ಧರ್ಮದ ವಿರುದ್ಧ ಎಲ್ಲಿ ಮಾತನಾಡಿದ್ದಾರೆ? ದ್ವೇಷದ ಭಾಷಣ ಮಾಡಿದವರು ಜಾಮೀನಿನ ಮೇಲೆ ಹೊರಗಿದ್ದರೆ, ಬಹಿರಂಗಪಡಿಸಿದವರು ಜೈಲಿನಲ್ಲಿದ್ದಾರೆ ಎಂದು ಝುಬೇರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಹೇಳಿದ್ದಾರೆ.







