ಬೆಳ್ತಂಗಡಿ: ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ ನಿಧನ

ಬೆಳ್ತಂಗಡಿ: ಮೆದುಳಿನ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಹುಜನ ಚಳುವಳಿಯ ಹಿರಿಯ ನಾಯಕ, ಅಂಬೇಡ್ಕರ್ ವಾದಿ ಪಿ. ಡೀಕಯ್ಯ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಅವರಿಗೆ 63 ವರ್ಷ ವಯಸ್ಸಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿ ಬೆಳೆಸುವುದರಲ್ಲಿ ಡಿಕಯ್ಯ ಅವರ ಪಾತ್ರ ಅತ್ಯಂತ ಹಿರಿದು. ಜಿಲ್ಲೆಯ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಅವರು ಚಳವಳಿಯನ್ನು ಕಟ್ಟಿದವರು. ತುಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಬಹುಜನ ಚಳುವಳಿಯನ್ನು ಕಟ್ಟಿದವರು.
ಅವರು ಸಾಕಷ್ಟು ಯುವ ನಾಯಕರನ್ನು ಸೃಷ್ಟಿಸಿದ್ದರು. ʼಕಾನದ ಕಟದರʼ ಇತಿಹಾಸದ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದ ಡೀಕಯ್ಯರು ಅಪ್ರತಿಮ ಬರಹಗಾರರು ಕೂಡ ಆಗಿದ್ದರು. ಅವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮನುವಾದದ ಕಡು ವಿರೋಧಿಯಾಗಿದ್ದ ಡೀಕಯ್ಯರು, ಅಸ್ಪೃಶ್ಯತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ತುಳುನಾಡು ಮನ್ಸ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ, ಬಿ.ಎಸ್.ಎನ್.ಎಲ್ ನಿವೃತ ಉದ್ಯೋಗಿಯಾಗಿದ್ದರು.
ಅವರು ಪತ್ನಿ ಹಿರಿಯ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ, ಕುಟುಂಬ ವರ್ಗದವರು ಹಾಗೂ ಅಪಾರ ಬೆಂಬಲಿಗರನ್ನು ಅಗಲಿದ್ದಾರೆ.
ಪಿ.ಡೀಕಯ್ಯನವರ ಅಕಾಲಿಕ ನಿಧನದಿಂದ ಅವರ ಅಭಿಮಾನಿಗಳು, ಹಿತೈಷಿಗಳು ತೀವ್ರವಾಗಿ ದುಃಖಿತರಾಗಿದ್ದಾರೆ. ಸಾಕಷ್ಟು ಹೋರಾಟಗಳಿಗೆ ಮಾರ್ಗದರ್ಶಕರಾಗಿದ್ದ ಪಿ.ಡೀಕಯ್ಯನವರ ನಿಧನದಿಂದ ಬಹುಜನ ಚಳುವಳಿಗೆ ಭಾರೀ ನಷ್ಟವಾಗಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪಿ. ಡಿಕಯ್ಯನವರ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಿ ಹಲವರ ಬದುಕಿಗೆ ದಾರಿ ತೋರಿದ್ದಾರೆ. ಅವರ ಅಂಗಾಗಳ ದಾನದ ಪ್ರಕ್ರಿಯೆಗಳು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ.







