ಸುರತ್ಕಲ್: ನಿಂತಿದ್ದ ಕಾರಿನ ಮೇಲೆ ಲಾರಿ ಮಗುಚಿ ಬಿದ್ದು ಓರ್ವ ಸ್ಥಳದಲ್ಲೇ ಮೃತ್ಯು

ಸುರತ್ಕಲ್: ನಿಂತಿದ್ದ ಕಾರಿನ ಮೇಲೆ ಲಾರಿಯೊಂದು ಮಗುಚಿ ಬಿದ್ದು ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಕಟ್ಟೆ ಸಿಗ್ನಲ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಕುಲಾಯಿ ಗೋಕುಲನಗರ ನಿವಾಸಿ ಲೋಕನಾಥ ಎಂದು ಗುರುತಿಸಲಾಗಿದೆ.
ಲೋಕನಾಥ ಅವರು ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆಯ ಪಕ್ಕದಲ್ಲಿ ರಸ್ತೆ ದಾಟುವ ಸಲುವಾಗಿ ಕಾರು ನಿಲ್ಲಿಸಿದ್ದರು ಎನ್ನಲಾಗಿದೆ. ಈ ವೇಳೆ ಹಿಂದಿನಿಂದ ಬಂದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಮಗು ಚಿಬಿದ್ದಿದೆ. ಈ ವೇಳೆ ಕಾರಿನೊಳಗಿದ್ದ ಲೋಕನಾಥ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಅಲ್ಲದೆ ಕಾರಿನ ಮುಂಭಾಗದಲ್ಲಿ ಇದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು ದ್ವಿಚಕ್ರ ವಾಹನ ಸವಾರ ತನ್ನ ಸ್ಕೂಟರ್ ಬಿಟ್ಟು ಓಡಿದ ಪರಿಣಾಮ ಮತ್ತೊಂದು ಜೀವ ಬಲಿಯಾಗುವುದು ತಪ್ಪಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.









