‘ಬಂಡಾಯ ಶಾಸಕರಿಗೆ ಶಿವಸೇನೆಯ ಚುನಾವಣಾ ಚಿಹ್ನೆ ಬಳಸಲು ಬಿಡುವುದಿಲ್ಲ': ಉದ್ಧವ್ ಠಾಕ್ರೆ
ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಒತ್ತಾಯಿಸಿದ ಮಾಜಿ ಮುಖ್ಯಮಂತ್ರಿ

Photo:PTI
ಮುಂಬೈ: ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ ನಂತರ ಶುಕ್ರವಾರ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಹೊಸ ಚುನಾವಣೆಗೆ ಒತ್ತಾಯಿಸಿದರು. ಬಂಡಾಯ ಶಾಸಕರು ಶಿವಸೇನೆಯ ಚುನಾವಣಾ ಚಿಹ್ನೆಯಾದ ಬಿಲ್ಲು ಹಾಗೂ ಬಾಣವನ್ನು ಬಳಸಲು ಬಿಡುವುದಿಲ್ಲ ಎಂದು ಗುಡುಗಿದರು ಎಂದು NDTV ವರದಿ ಮಾಡಿದೆ.
ಶಿವಸೇನೆಯ ಬಿಲ್ಲು ಹಾಗೂ ಬಾಣದ ಚಿಹ್ನೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಂಧೆ ಪಾಳೆಯದ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತಿರುವುದರಿಂದ ನ್ಯಾಯಾಂಗದ ಮೇಲೆ ತನಗೆ ವಿಶ್ವಾಸವಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್ ಶಿವಸೇನೆಯ ಭವಿಷ್ಯವನ್ನು ಮಾತ್ರವಲ್ಲ, ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯವನ್ನೂ ನಿರ್ಧರಿಸುತ್ತದೆ ಎಂದು ಉದ್ಧವ್ ಹೇಳಿದರು.
"ನಮಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಕಾಳಜಿ ಇದೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯಾಂಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಎಷ್ಟು ಪ್ರಬಲವಾಗಿದೆ ಎಂಬುದನ್ನು ಜನರು ನೋಡುತ್ತಿದ್ದಾರೆ. ನಿರ್ಧಾರದ ಬಗ್ಗೆ ನಾನು ಚಿಂತಿಸುವುದಿಲ್ಲ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ’’ ಎಂದರು.







