ಕೇವಲ ನಾಲ್ಕೇ ಸಮುದಾಯ ಗಟ್ಟಿಯಾದರೆ ಹಿಂದು ಸಮಾಜ ಉಳಿಯಲ್ಲ: ಸತ್ಯಜಿತ್ ಸುರತ್ಕಲ್
ಪಠ್ಯಪುಸ್ತಕದಿಂದ ನಾರಾಯಣಗುರು ವಿಚಾರ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ

ಉಡುಪಿ: ಅಂದು ದಲಿತರು ಹಿಂದುಳಿದವರ್ಗದವರು ಮತಾಂತರ ಗೊಳ್ಳಲು ಆಗಿನ ಮೇಲ್ವರ್ಗದವರ ದೌರ್ಜನ್ಯ ಶೋಷಣೆಯೇ ಕಾರಣವಾಗಿದೆ. ಕೇವಲ ನಾಲ್ಕು ಸಮುದಾಯದವರು ಮಾತ್ರ ಆರ್ಥಿಕ, ಸಾಮಾಜಿಕ, ರಾಜ ಕೀಯವಾಗಿ ಅಧಿಕಾರ ಪಡೆದು ಗಟ್ಟಿಯಾದರೆ ಹಿಂದು ಸಮಾಜ ಉಳಿಯುವುದಿಲ್ಲ. ದಲಿತ, ಹಿಂದುಳಿದವರ್ಗದ ವರಿಗೂ ಸ್ಥಾನಮಾನ ನೀಡುವ ಕಾರ್ಯ ಆಗಬೇಕು ಎಂದು ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜೀತ್ ಸುರತ್ಕಲ್ ಹೇಳಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನದಿಂದ ಕೈಬಿಟ್ಟಿರುವುದನ್ನು ಖಂಡಿಸಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿದ್ದ ೯ ಮಂದಿ ಪೈಕಿ ಎಂಟು ಮಂದಿ ಮೇಲ್ವರ್ಗದವರೇ ಇದ್ದರು. ಅಸ್ಪಶ್ಯತೆ ಹೆಸರಿನಲ್ಲಿ ಮೇಲ್ವರ್ಗದವರು ಹಿಂದುಳಿದ ವರ್ಗದವರ ಮೇಲೆ ನಡೆಸುತ್ತಿದ್ದ ದೌರ್ಜನ್ಯ, ಶೋಷಣೆ ವಿದ್ಯಾರ್ಥಿಗಳ ಅರಿವಿಗೆ ಬರಬಾರದೆಂಬ ಕಾರಣಕ್ಕಾಗಿ ಅವರ ವಿಚಾರವನ್ನು ಪಠ್ಯದಿಂದ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದರು.
ಪಠ್ಯ ಪುಸ್ತಕ ಪರಿಶೀಲನೆಗೆ ಕೊಟ್ಟ ಅಧಿಕಾರವನ್ನು ದುರುಪಯೋಗ ಪಡಿಸಿ ಕೊಂಡು ಪಠ್ಯವನ್ನು ಪರಿಷ್ಕರಣೆ ಮಾಡಲಾಗಿದೆ. ಆ ನೆಪದಲ್ಲಿ ಸಮಾಜ ವಿಜ್ಞಾನ ದಲ್ಲಿದ್ದ ನಾರಾಯಣ ಗುರುಗಳ ಪಾಠವನ್ನು ತೆಗೆದು ಹಾಕಿ ಕನ್ನಡ ಪಠ್ಯಪುಸ್ತಕಕ್ಕೆ ಸೇರಿಸಲಾಗಿದೆ. ಆದರೆ ಐಚ್ಛಿಕ ವಿಷಯವಾಗಿರುವ ಕನ್ನಡವನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಶೇ.೨೫ರಷ್ಟು ಮಾತ್ರ. ಇದರಿಂದ ಶೇ.೭೫ರಷ್ಟು ವಿದ್ಯಾರ್ಥಿಗಳು ನಾರಾಯಣಗುರುಗಳ ಕುರಿತು ಅಧ್ಯಯನ ಮಾಡಲು ಅವಕಾಶ ವಂಚಿತರಾಗುತ್ತಾರೆ ಎಂದರು.
ನಾರಾಯಣಗುರು ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪಿಸುವಂತೆ ಕೇಳಿದರೆ, ಇನ್ನು ಮುಂದೆ ನಿಗಮ ಮಂಡಳಿ ನೀಡಲು ಆಗುವುದಿಲ್ಲ ಹೇಳಿದ ಸರಕಾರ, ಅದರ ನಂತರ ಶೇ.೩-೪ರಷ್ಟು ಜನಸಂಖ್ಯೆ ಇರುವ ಸಮುದಾಯಗಳಿಗೆ ನಿಗಮ ಮಂಡಳಿ ನೀಡಿ, ಕೋಟ್ಯಂತರ ರೂ. ಅನುದಾನ ಒದಗಿಸಿತು. ನಾರಾಯಣ ಗುರುಗಳ ಹೆಸರಿನಲ್ಲಿ ಐದು ವಸತಿ ಶಾಲೆ ಘೋಷಿಸಿದರೂ ಅದಕ್ಕೆ ಅನುದಾನ ಬಿಡುಗಡೆ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸರಕಾರ ನೀಡಿಲ್ಲ ಎಂದು ಅವರು ದೂರಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮ ರಾಜ್ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಹಿಂಸೆ, ಕೋಮುಗಲಭೆಗಳನ್ನು ದೂರ ಮಾಡಲು ನಾರಾಯಣಗುರುಗಳ ತತ್ವ ಸಂದೇಶ ಸಾಕಷ್ಟು ಪ್ರಸ್ತುತವಾಗಿದೆ. ಆದರೆ ಈ ಸಮಿತಿಯವರು ಅವರ ವಿಚಾರವನ್ನು ಕೈಬಿಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಹುನ್ನಾರ ನಡೆಸು ತ್ತಿದ್ದಾರೆ. ಆದುದರಿಂದ ಈ ಹಿಂದಿನ ಪಠ್ಯ ಪುಸ್ತಕವನ್ನೇ ಮುಂದುವರೆಸ ಬೇಕು. ಇದರಲ್ಲಿ ನ್ಯಾಯ ಸಿಗದಿದ್ದರೆ ಮುಂದೆ ತೀವ್ರ ಪ್ರತಿಭಟನೆ ಎದುರಿಸಬೇಕಾ ಗಿತು ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಪೆ ರಾಘವೇಂದ್ರ ಮಾತನಾಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಅವರಿಗೆ ಕಟಪಾಡಿ ವಿಶ್ವನಾಥ ಕ್ಷೇತ್ರ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ಮುನ್ನ ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಬಿಲ್ಲವ ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ಜನಾರ್ದನ ತೋನ್ಸೆ, ನವೀನ್ ಅಮೀನ್ ಶಂಕರಪುರ, ಸುನೀಲ್ ಡಿ.ಬಂಗೇರ, ಎಚ್.ಕೆ.ಸಾಲಿಯಾನ್ ಬೆಳ್ಮಣ್, ಜಗನ್ನಾಥ್ ಕೋಟೆ, ಮಂಜುನಾಥ್ ಪೂಜಾರಿ ಹೆಬ್ರಿ, ಸುಧೀರ್ ಕುಮಾರ್ ಪಡುಬಿದ್ರಿ, ರಾಜು ಪೂಜಾರಿ ಬೈಂದೂರು, ದಿನೇಶ್ ಕುಂದಾಪುರ, ಡಿ.ಆರ್.ರಾಜು ಕಾರ್ಕಳ, ಪ್ರಭಾಕರ ಬಂಗೇರ, ಬಿಜೆಪಿ ನಾಯಕಿ ಗೀತಾಂಜಲಿ ಸುವರ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಮೊದಲಾದ ವರು ಉಪಸ್ಥಿತರಿದ್ದರು.
ಯಡಿಯೂರಪ್ಪ, ಅಶೋಕ್, ಈಶ್ವರಪ್ಪ ಜಾತಿವಾದಿಗಳಲ್ಲವೇ?
ಕಯ್ಯಾರ ಕಿಂಞಣ್ಣ ರೈ ವಿಚಾರ ಕೈಬಿಟ್ಟಿರುವುದಕ್ಕೆ ಬಂಟರು ಕೇವಲ ಪತ್ರಿಕಾಗೋಷ್ಠಿ ನಡೆಸಿದರೆ, ಆಡಳಿತ ಪಕ್ಷದ ರಾಜ್ಯಾಧ್ಯಕ್ಷ ಜಾಗತಿಕ ಬಂಟರ ಅಧ್ಯಕ್ಷರ ಮನೆಗೆ ಹೋಗಿ ಸರಿಪಡಿಸುವ ಭರವಸೆ ನೀಡುತ್ತಾರೆ. ಇವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಾಗಿದ್ದಾರೆಯೇ ಎಂದು ಸತ್ಯಜಿತ್ ಸುರತ್ಕಲ್ ಪ್ರಶ್ನಿಸಿದರು.
ನಾವು ಜಾತಿ ಬಗ್ಗೆ ಮಾತನಾಡಿದರೆ ಜಾತಿವಾದಿಗಳು ಎನ್ನುತ್ತಾರೆ. ಈಗ ಬಿಜೆಪಿ ರಾಜ್ಯಾಧ್ಯಕ್ಷರು ಜಾತಿವಾದಿ ಆಗುವುದಿಲ್ಲವೇ? ಕುರುಬರ ಪರವಾಗಿ ಮಾತನಾ ಡುವ ಈಶ್ವರಪ್ಪ, ಲಿಂಗಾಯುತ ಸಮುದಾಯಕ್ಕೆ ಕಠಿಬದ್ಧರಾಗಿರುವ ಯಡಿ ಯೂರಪ್ಪ, ಒಕ್ಕಲಿಗ ಸಮುದಾಯದ ಅಶೋಕ್ ಜಾತಿವಾದಿಗಳಾಗುವು ದಿಲ್ಲವೇ? ಕೇವಲ ಬಿಲ್ಲವ ಸಮಾಜದ ಬಗ್ಗೆ ಮಾತನಾಡಿದವರಿಗೆ ಮಾತ್ರ ಜಾತಿ ವಾದಿ ಕೋಮುವಾದಿ ಹಣೆಪಟ್ಟಿ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ದೂರಿದರು.