ಜು.9ರಿಂದ ಸೀಟ್ ಬುಕ್ಕಿಂಗ್ ಪ್ರಾರಂಭ; ಮುಂಬೈ-ತೋಕೂರು ಮಧ್ಯೆ ಒಂದು ತಿಂಗಳು ಗಣಪತಿ ವಿಶೇಷ ರೈಲು

ಉಡುಪಿ: ಮುಂಬೈಯಲ್ಲಿ ವಾಸವಾಗಿರುವ ಕರಾವಳಿಗರ ಬೇಡಿಕೆಗೆ ಮಣಿದಿರುವ ರೈಲ್ವೆ ಇಲಾಖೆ, ಕೇಂದ್ರ ರೈಲ್ವೆಯ ಸಹಯೋಗದೊಂದಿಗೆ ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ಹಾಗೂ ಮಂಗಳೂರು ಸಮೀಪದ ತೋಕೂರು ನಡುವೆ ಒಂದು ತಿಂಗಳ ಕಾಲ ದೈನಂದಿನ ಗಣಪತಿ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ಮುಂದಿನ ಆಗಸ್ಟ್ 13ರಿಂದ ಸೆಪ್ಟಂಬರ್ 11ರವರೆಗೆ ಗಣಪತಿ ವಿಶೇಷ ರೈಲು ಪ್ರತಿದಿನ ಮುಂಬಯಿ ಹಾಗೂ ತೋಕೂರು ನಡುವೆ ಓಡಾಡಲಿದೆ. ಈ ರೈಲಿಗೆ ಮುಂಗಡ ಬುಕ್ಕಿಂಗ್ ಜು.9ರಿಂದ ಪ್ರಾರಂಭಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ನಂ.೦೧೧೫೩ ಲೋಕಮಾನ್ಯ ತಿಲಕ್-ತೋಕೂರು ದೈನಂದಿನ ವಿಶೇಷ ರೈಲು ಆ.೧೩ರಿಂದ ಸೆ.೧೧ರವರೆಗೆ ಪ್ರತಿದಿನ ರಾತ್ರಿ ೧೦:೧೫ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಸಂಜೆ ೪:೩೦ಕ್ಕೆ ತೋಕೂರು ತಲುಪಲಿದೆ.
ಅದೇ ರೀತಿ ರೈಲು ನಂ.೦೧೧೫೪ ತೋಕೂರು-ಲೋಕಮಾನ್ಯ ತಿಲಕ್ ದೈನಂದಿನ ವಿಶೇಷ ರೈಲು ಆ.೧೪ರಿಂದ ಸೆ.೧೨ರವರೆಗೆ ಪ್ರತಿದಿನ ರಾತ್ರಿ ೭:೩೦ಕ್ಕೆ ತೋಕೂರು ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಅಪರಾಹ್ನ ೧:೨೫ಕ್ಕೆ ಮುಂಬಯಿ ತಲುಪಲಿದೆ.
ಈ ರೈಲಿಗೆ ಥಾಣೆ, ಪನ್ವೇಲ್, ರೋಹಾ, ಮಂಗಾವ್, ಖೇಡ್, ಚಿಪ್ಳುಣ್, ಸರ್ವಾಡ, ಸಂಗಮೇಶ್ವರ ರೋಡ್, ರತ್ನಗಿರಿ, ಅಡವಾಳಿ, ರಾಯ್‌ಪುರ ರೋಡ್, ವೈಭವವಾಡಿ ರೋಡ್, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಚೌತಿ ಹಬ್ಬದ ಪ್ರಯುಕ್ತ ಓಡುವ ಈ ರೈಲು ಒಟ್ಟು ೨೪ ಕೋಚ್‌ಗಳನ್ನು ಹೊಂದಿರುತ್ತದೆ. ಒಂದು ೨ಟಯರ್ ಎಸಿ ಕೋಚ್, ನಾಲ್ಕು ೩ಟಯರ್ ಎಸಿ ಕೋಚ್, ೧೨ ಸ್ಲೀಪರ್ ಕೋಚ್, ಐದು ಸೆಕೆಂಡ್ ಸಿಟ್ಟಿಂಗ್ ಕೋಚ್, ಎರಡು ಎಸ್‌ಎಲ್‌ಆರ್‌ಗಳೊಂದಿಗೆ ಪ್ರತಿದಿನ ಸಂಚರಿಸಲಿದೆ. ಕೋವಿಡ್-೧೯ ಮಾರ್ಗಸೂಚಿಗಳೊಂದಿಗೆ ಪ್ರಯಾಣಿಕರು ಇದರಲ್ಲಿ ಸಂಚರಿಸಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಶನಿವಾರದಿಂದ ಬುಕ್ಕಿಂಗ್ ಪ್ರಾರಂಭ
ಮುಂಬಯಿ ಹಾಗೂ ಸುರತ್ಕಲ್ ಸಮೀಪದ ತೋಕೂರು ನಡುವೆ ಆ.೧೩ರಿಂದ ಪ್ರತಿದಿನ ಸಂಚರಿಸುವ ಗಣಪತಿ ವಿಶೇಷ ರೈಲಿಗೆ ಜು.೯ರ ಶನಿವಾರದಿಂದ ಸೀಟು ಬುಕ್ಕಿಂಗ್ ಪ್ರಾರಂಭಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.
ಆಸಕ್ತ ಪ್ರಯಾಣಿಕರು ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟಮ್ (ಪಿಆರ್‌ಎಸ್), ಇಂಟರ್‌ನೆಟ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಸೀಟುಗಳನ್ನು ಕಾದಿರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.