ಏರ್ಫೋರ್ಸ್ ಫ್ಲೈಯಿಂಗ್ ಬ್ರ್ಯಾಂಚ್ಗೆ ಮಂಗಳೂರಿನ ಮನೀಷಾ ಶೆಟ್ಟಿ ಆಯ್ಕೆ
ರಾಜ್ಯದಿಂದ ಆಯ್ಕೆಯಾದ ಏಕೈಕ ಅಭ್ಯರ್ಥಿ

ಮನೀಷಾ ಶೆಟ್ಟಿ
ಮಂಗಳೂರು: ಸೇನೆಗೆ ಸೇರುವ ತಂದೆಯ ಕನಸನ್ನು ನನಸಾಗಿಸಿ ಭಾರತೀಯ ವಾಯುಸೇನೆಯ ಪೈಲಟ್ ಆಗಲು ಮಂಗಳೂರಿನ ಧೀರೆ ಮನಿಷಾ ಶೆಟ್ಟಿ ಇದೀಗ ದುಂಡಿಗಲ್ ತೆರಳಿದ್ದಾರೆ.
ಏರ್ಫೋರ್ಸ್ ಫ್ಲೈಯಿಂಗ್ ಬ್ರಾಂಚ್ಗೆ ಆಯ್ಕೆಯಾಗಿರುವ ರಾಜ್ಯದ ಏಕೈಕ ಯುವತಿ ಈಕೆಯಾಗಿದ್ದು, ತೆಲಂಗಾಣದ ದುಂಡಿಗಲ್ನ ಏರ್ಫೋರ್ಸ್ ಅಕಾಡೆಮಿಯಲ್ಲಿ ಜು. 9ರಿಂದ ತರಬೇತಿಯನ್ನು ಪಡೆಯಲಿದ್ದಾರೆ.
ಮನೀಷಾ ಶೆಟ್ಟಿ, ಅಶೋಕನಗರ ನಿವಾಸಿ ಭಾರತೀಯ ಸ್ಟೇಟ್ ಬ್ಯಾಂಕ್ನ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಮತ್ತು ಸರಕಾರಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಶೆಟ್ಟಿ ದಂಪತಿ ಪುತ್ರಿ.
ಮನೀಷಾ ಅವರ ತಂದೆ ಮನೋಹರ ಶೆಟ್ಟಿ ಈ ಹಿಂದೆ ವಾಯುಪಡೆಗೆ ಆಯ್ಕೆಯಾಗಿದ್ದರು. ಮನೋಹರ ಶೆಟ್ಟಿ ಅವರ ಅಣ್ಣ ಯಶವಂತ್ ಶೆಟ್ಟಿ ಏರ್ಫೋರ್ಸ್ನಲ್ಲಿ (ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು ಸುಮಾರು 16 ವರ್ಷಗಳ ಸೇವೆಯಲ್ಲಿದ್ದು 1994ರಲ್ಲಿ ನಿವೃತ್ತರಾಗಿದ್ದಾರೆ) ಇದ್ದ ಕಾರಣ ಮನೋಹರ್ ಅವರಿಗೆ ಈ ಕಾರಣದಿಂದ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್ ಮಾಡಬೇಕೆಂಬ ಕನಸು ಅವರದಾಗಿತ್ತು. ಇದಕ್ಕಾಗಿ ಬಾಲ್ಯದಿಂದಲೇ ಇಬ್ಬರು ಮಕ್ಕಳ ಚಲನವಲನ, ಆಸಕ್ತಿ ಗಮನಿಸಿ ಮನೀಷಾರನ್ನು ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದ್ದರು.
ಮನೀಷಾ ಶೆಟ್ಟಿ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಸೈಂಟ್ ಅಲೋಶಿಯಸ್ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.
ಏರ್ಫೋರ್ಸ್ಗೆ ಆಯ್ಕೆ 6 ತಿಂಗಳ ಪ್ರಕ್ರಿಯೆಯಾಗಿದ್ದು, ಪ್ರಾರಂಭದಲ್ಲಿ ಏರ್ಫೋರ್ಸ್ ಕಾಮನ್ ಎಂಟ್ರೆಸ್ ಎಕ್ಸಾಂ ಬರೆಯಬೇಕು. ದೇಶದ 5 ಕೇಂದ್ರಗಳಲ್ಲಿ (ಮೈಸೂರು, ಗುಜರಾತ್, ಗುವಾಹಟಿ, ವಾರಣಾಸಿ, ಡೆಹ್ರಾಡೂನ್) ಪರೀಕ್ಷೆ ನಡೆದು, ಇದರಲ್ಲಿ ನಿಯಮಿತ ಅಂಕ ತೆಗೆಯಬೇಕು. ಇದರಲ್ಲಿ 250 ವಿದ್ಯಾರ್ಥಿನಿಯರು ವಾಯುಪಡೆಗೆ ಪರೀಕ್ಷೆ ಬರೆದಿದ್ದು, ಇವರಲ್ಲಿ 59 ಮಂದಿ ಎರಡನೇ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಒಂದು ವಾರ ವಿವಿಧ ಪರೀಕ್ಷೆ ನಡೆಸಿ ಮತ್ತೊಂದು ಹಂತಕ್ಕೆ 15 ಮಂದಿ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಕಠಿಣ ದೈಹಿಕಾ ಕ್ಷಮತಾ ಪರೀಕ್ಷೆ (ಮೆಡಿಕಲ್ ಟೆಸ್ಟ್) ನಡೆಯುತ್ತದೆ. ಇವರಲ್ಲಿ 5ಮಂದಿ ಪೈಲಟ್ ಆಯ್ಕೆ ಮಾಡಿದ್ದು, ಇವರಲ್ಲಿ ಮನೀಷಾ ಸೇರಿದಂತೆ 3 ಮಂದಿ ಆಯ್ಕೆಯಾಗಿದ್ದಾರೆ. ಉಳಿದಿಬ್ಬರು ಲಕ್ನೋ ಮತ್ತು ದಿಲ್ಲಿಯವರು. ಪೈಲಟ್ಗೆ ಆಯ್ಕೆಯಾಗುವವರು 24 ವರ್ಷದೊಳಗಿರಬೇಕು ಮತ್ತು ಎಸ್ಎಸ್ಬಿ ಕ್ಲಿಯರ್ ಆದ ಮೇಲೆ ಸಿಪಿಎಸ್ಎಸ್ (ಕಂಪ್ಯೂಟರೈಸ್ಡ್ ಪೈಲಟ್ ಸೆಲೆಕ್ಷನ್ ಸಿಸ್ಟಂ) ಪರೀಕ್ಷೆಯನ್ನು ಒಂದೇ ಬಾರಿಗೆ ಪಾಸ್ ಮಾಡಬೇಕು. ಹೀಗಾದರೆ ಮಾತ್ರ ಪೈಲಟ್ ಆಗಲು ಅವಕಾಶ.
ಸಾಮಾನ್ಯವಾಗಿ ಏರ್ಪೋರ್ಸ್ ಆಯ್ಕೆಯಾಗಬೇಕಾದರೆ ಕೋಚಿಂಗ್ ಪಡೆಯುತ್ತಾರೆ. ಆದರೆ ಮನೀಷಾ ಯಾವುದೇ ತರಬೇತಿ ಪಡೆಯದೆ ತಂದೆಯ ಮಾರ್ಗದರ್ಶನ ಪಡೆದು ಯೂಟ್ಯೂಬ್ನಿಂದಲೇ ಮಾಹಿತಿ ಸಂಗ್ರಹಿಸುತ್ತಿದ್ದರು. ಜತೆಗೆ ಮನೀಷಾ ದೊಡ್ಡಪ್ಪ ಯಶವಂತ್ ಶೆಟ್ಟಿ ಕೂಡಾ ಮನಿಷಾರ ಪ್ರಯತ್ನಕ್ಕೆ ಬೆಂಗಾವಲಾಗಿದ್ದರು.
ಮನೀಷಾ 6ನೇ ತರಗತಿಯಲ್ಲೇ ಕ್ರೀಡಾಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿದ್ದರು. ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಎನ್ಸಿಸಿಯಲ್ಲಿ ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆಯಾಗಿದ್ದರು. ಏರ್ಪೋರ್ಸ್ನ ಪೈಲಟ್ಗೆ ಆಯ್ಕೆಯಾಗಬೇಕೆಂದು ತಂದೆಯ ಕನಸಾಗಿತ್ತು. ಅದರಂತೆ ಈ ಹಿಂದೆ ಆರ್ಮಿ, ನೇವಿಗೂ ಆಯ್ಕೆಯಾಗಿದ್ದರೂ, ಪೈಲಟ್ ಆಗುವ ಇಚ್ಛೆಯಿಂದ ಏರ್ಪೋರ್ಸ್ ಪ್ರಯತ್ನ ಮತ್ತೆ ಮುಂದುವರಿಸಿದರು.
ಆಕೆ ಏನೇ ಸಾಧನೆ ಮಾಡಿದ್ದರೂ ಅದು ಆಕೆಯ ಪ್ರಯತ್ನದ ಫಲ. ಪೋಷಕರಾಗಿ ನಾವು ಆಕೆಯ ಬೆನ್ನು ತಟ್ಟಿದ್ದೇವೆ ಅಷ್ಟೇ ಎನುತ್ತಾರೆ ಮನೀಷಾ ಶೆಟ್ಟಿಯ ತಂದೆ, ತಾಯಿಯ ಜತೆಗೆ ಆಕೆಯ ದೊಡ್ಡಪ್ಪ.
‘‘ಭಾರತೀಯ ವಾಯುಸೇನೆ ಸೇರುವುದು ನನ್ನ ಬಾಲ್ಯದ ಕನಸು. ಕ್ರೀಡೆ, ಸಾಹಸಮಯ ಚಟುವಟಿಕೆಗಳಲ್ಲಿ ನಾನು ಬಹಳ ಆಸಕ್ತಿ ಹೊಂದಿದ್ದೆ. ಅಪ್ಪ ಎನ್ಸಿಸಿಯಲ್ಲಿದ್ದರು. ಅವರೇ ನನಗೆ ಮೊದಲ ಪ್ರೇರಣೆ. ನಾನು ಸೈಂಟ್ ಅಲೋಶಿಯಸ್ನಲ್ಲಿ ಪಿಯುಸಿಯಲ್ಲಿದ್ದಾಗ ಎನ್ಸಿಸಿಯಲ್ಲಿ ನೇವಿ ವಿಂಗ್ನಲ್ಲಿದ್ದೆ. ಎನ್ಸಿಸಿ ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಘಟ್ಟ ಎಂದು ನನ್ನ ಭಾವನೆ. ನಾನು ಏರ್ಫೋರ್ಸ್ ಸೆಲೆಕ್ಷನ್ಗೆ ಲಿಖಿತ ಪರೀಕ್ಷೆ ಬರೆಯಬೇಕಿತ್ತು. ಅದು ಏರ್ಫೋರ್ಸ್ ಕಾಮನ್ ಅಡ್ಮಿಶನ್ ಟೆಸ್ಟ್. ಅದನ್ನು 2 ಲಕ್ಷ ಜನ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಪಾಸ್ ಆದ ಬಳಿಕ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಎಂಬ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ನಾನಾ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಫ್ಲೈಯಿಂಗ್ ಬ್ರಾಂಚ್ಗೆ ಕಂಪ್ಯೂಟರೈಸ್ಡ್ ಸೆಲೆಕ್ಷನ್ ಸಿಸ್ಟಮ್ ಮೂಲಕ ಆಯ್ಕೆ ನಡೆಸಲಾಗುತ್ತದೆ’’
-ಮನೀಷಾ ಶೆಟ್ಟಿ.