ಕೊಡಗಿನಲ್ಲಿ ಮುಂದುವರಿದ ಮಳೆ: 193 ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ಶನಿವಾರ (ಜು.9) ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಮಡಿಕೇರಿ ಜು.8 : ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಬಿಡುವು ನೀಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ನದಿಗಳು ತುಂಬಿ ಹರಿಯುತ್ತಿದ್ದು, ವಿವಿಧೆಡೆ ಗುಡ್ಡಗಳು ಅಪಾಯವನ್ನು ಆಹ್ವಾನಿಸುತ್ತಿವೆ. ಸುಮಾರು 193 ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.
ಭಾರೀ ಮಳೆಯಿಂದ ಕಾವೇರಿ ಉಕ್ಕಿ ಹರಿದು ಪ್ರವಾಹವೇರ್ಪಟ್ಟಿದ್ದು, ಇದರಿಂದ ಬಾಧಿತವಾಗಬಹುದಾದ ಕರಡಿಗೋಡು, ಗುಹ್ಯ ಗ್ರಾಮಗಳ ನದಿ ಪಾತ್ರದ 193 ಕುಟುಂಬಗಳಿಗೆ ಸಿದ್ದಾಪುರ ಗ್ರಾಮ ಪಂಚಾಯ್ತಿ ಮತ್ತು ಕಂದಾಯ ಇಲಾಖೆ ನೋಟಿಸ್ ನೀಡಿ, ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದೆ.
ಅಮ್ಮತ್ತಿ ಹೋಬಳಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಮತ್ತು ಗುಹ್ಯ ಗ್ರಾಮಗಳು ನದಿ ದಂಡೆಯಲ್ಲಿದ್ದು, ನೂರಾರು ಕುಟುಂಬಗಳು ನದಿ ತೀರದ ಅನತಿ ದೂರದಲ್ಲೆ ಮನೆಗಳನ್ನು ನಿರ್ಮಿಸಿಕೊಂಡು ಕಳೆದ ಹಲ ದಶಕಗಳಿಂದ ವಾಸವಾಗಿವೆ. ಈ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ.
ಕಂದಾಯ ಪರಿವೀಕ್ಷಕ ಅನಿಲಕುಮಾರ್ ಮತ್ತು ಸಿದ್ದಾಪುರ ಗ್ರಾಮ ಪಂಚಾಯ್ತಿಯ ಪಿಡಿಒ ಮನಮೋಹನ್ ಅವರ ಮಾರ್ಗದರ್ಶನದಲ್ಲಿ, ಕರಡಿಗೋಡು ಗ್ರಾಮದಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಕಾರ್, ಗ್ರಾಮ ಸಹಾಯಕ ಕೃಷ್ಣಕುಟ್ಟಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಈಶ್ವರ,ಗ್ರಾಮ ಪಂಚಾಯ್ತಿ ಸಿಬ್ಬಂದಿ ಗಗನ್, ಅದೇ ರೀತಿ ಗುಹ್ಯ ಗ್ರಾಮದಲ್ಲಿ ಗ್ರಾಮ ಲೆಕ್ಕಿಗರಾದ ಮುತ್ತಪ್ಪ ಶ್ರೀಕಾಂತ್ ಹಾಗೂ ಗ್ರಾಮ ಸಹಾಯಕರಾದ ಮಂಜುನಾಥ್ ನದಿ ತೀರದ ನಿವಾಸಿಗಳ ಮನೆ ಮನೆಗೆ ತೆರಳಿ ನೋಟಿಸನ್ನು ವಿತರಣೆ ಮಾಡಿದ್ದಾರೆ.
ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳು ಎಚ್ಚರ ವಹಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ಪ್ರವಾಹದ ಮಟ್ಟದಲ್ಲಿ ಏರಿಕೆಯಾದರೆ ಅಗತ್ಯ ಕ್ರಮಗಳನ್ನು ಮತ್ತು ಪರಿಹಾರ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.
ಕೊಡಗಿನಾದ್ಯಂತ ವರ್ಷಧಾರೆಯ ಪರಿಣಾಮ ಅಲ್ಲಲ್ಲಿ ಮರಗಳು ಧರೆಗುರುಳಿರುವ, ಬರೆ ಕುಸಿತ, ಮನೆಗೆ ಹಾನಿಯಾದ ಘಟನೆಗಳು ಮುಂದುವರೆದಿದೆ.
ಗುಡ್ಡ ಕುಸಿತ
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಸಮೀಪದ ಒಂದನೇ ಮೊಣ್ಣಂಗೇರಿ ಗ್ರಾಮದ ಐರೀರ ವೆಂಕಪ್ಪ ಅವರ ಮನೆಯ ಮುಂದಿನ ಗುಡ್ಡದ ಕುಸಿತದಿಂದ ಕಾಫಿ ತೋಟದ ಒಂದು ಭಾಗ ನಾಶವಾಗಿದೆ. ವೆಂಕಪ್ಪ ಅವರ ಮನೆ ಅಪಾಯದ ಸ್ಥಿತಿಯಲ್ಲಿದ್ದು, ಗುಡ್ಡ ಕುಸಿತದ ಸ್ಥಳದಲ್ಲಿ ಜಲ ನೀರು ಹರಿಯುತ್ತಿದೆ. ಮಣ್ಣು ಮತ್ತಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ.
ರಸ್ತೆ ಬದಿ ಕುಸಿತ
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರಾತ್ರಿಯ ಅವಧಿಯಲ್ಲಿನ ಭಾರೀ ಗಾಳಿ ಆತಂಕವನ್ನು ಹುಟ್ಟು ಹಾಕಿತ್ತು. ನಗರದ ಸಾಯಿ ಹಾಕಿ ಮೈದಾನದ ಬಳಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ತೆರಳುವ ರಸ್ತೆಯ ಎಡ ಪಾಶ್ರ್ವ ಕುಸಿತಕ್ಕೆ ಒಳಗಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ರಾಮನಳ್ಳಿ ಗ್ರಾಮದ ವಿನಾತ್ ಕುಮಾರ್ ಎಂಬವರ ಮನೆ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ. ಶನಿವಾರಸಂತೆ ಕಂದಾಯ ಅಧಿಕಾರಿಗಳಾದ ರಜಾಕ್ ಅವರು ಸ್ಥಳ ಪರಿಶೀಲನೆ ನಡೆಸಿದರು.
ಬೆಟ್ಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆರವನಾಡು ಗ್ರಾಮದ ಸಣ್ಣಮನೆ ಸಕೇಶ್ ಕುಮಾರ್ ಎಂಬವರ ವಾಸದ ಮನೆಯ ಮುಂಭಾಗದ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ, ಪಿಡಿಒ ಉದಯ, ಗ್ರಾಮಲೆಕ್ಕಿಗರಾದ ಮಹಾನಂದ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಅಯ್ಯಗಡೇರ ಮುತ್ತಪ್ಪ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು.
ಶಾಲಾ ಕಾಲೇಜುಗಳಿಗೆ ರಜೆ
ಮಹಾಮಳೆ ಬಿಡುವು ನೀಡದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜು.9 ರಂದು ಕೊಡಗಿನ ಎಲ್ಲಾ ಅಂಗನವಾಡಿ ಮತ್ತು ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
::: ಶಾಸಕರ ಭೇಟಿ :::
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಹಾನಿಯಾದ ಮನೆಗಳಿಗೆ ಶಾಸಕ ಅಪ್ಪಚ್ಚು ರಂಜನ್ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರದ ಭರವಸೆ ನೀಡಿ ಸಾಂತ್ವನ ಹೇಳಿದರು.
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯತಿಗೆ ಸೇರಿದ ಏಳನೇ ಮೈಲು ನಿವಾಸಿ ಜಾನಕಿ ಅವರ ಮನೆಯು ಮಳೆಗೆ ಕುಸಿದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸುಂಟಿಕೊಪ್ಪದ ಗಿರಿಯಪ್ಪ ಅವರ ಮನೆಗೆ ಆಗಮಿಸಿದ ಶಾಸಕರು ನಂತರ ಬೃಹದಾಕಾರದ ಮರ ಬಿದ್ದು ಹಾನಿಯಾದ ಖದೀಜ ಅವರ ಮನೆಗೆ ಭೇಟಿ ನೀಡಿ ದುರಸ್ತಿ ಕಾರ್ಯಕ್ಕೆ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.
ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಪ್ರಕಾಶ್, ಸುಂಟಿಕೊಪ್ಪ ನಾಡಕಚೇರಿಯ ಉಪ ತಹಶೀಲ್ದಾರ್ ಹೆಚ್.ಆರ್.ಶಿವಪ್ಪ, ಕಂದಾಯ ಪರಿವೀಕ್ಷಕ ಎಂ.ಹೆಚ್.ಪ್ರಶಾಂತ್, ಗ್ದಾಮ ಲೆಕ್ಕಿಗ ನಾಗೇಂದ್ರ,ನೋಡಲ್ ಅಧಿಕಾರಿ ಪ್ರಭು, ಸುಂಟಿಕೊಪ್ಪ ಗ್ರಾಮ ಪಂಚಾಯತಿ ಪಿಡಿಒ ವೇಣುಗೋಪಾಲ್, ಅಧ್ಯಕ್ಷೆ ಶಿವಮ್ಮ ಇದ್ದರು.









