ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೊಟೇಲ್; ಜಾಗತಿಕ ಟೆಂಡರ್ ಆಹ್ವಾನಿಸಲು ನಿರ್ಧಾರ: ಸಚಿವ ಆನಂದ್ ಸಿಂಗ್

ಬೆಂಗಳೂರು, ಜು. 8: ‘ಆದಾಯದ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೊಟೇಲ್ ಅನ್ನು ಖಾಸಗಿಯವರಿಗೆ ವಹಿಸಲು ನಿರ್ಧರಿಸಿದ್ದು, ಈ ಸಂಬಂಧ ಜಾಗತಿಕ ಟೆಂಡರ್ ಆಹ್ವಾನಿಸಲು ಉದ್ದೇಶಿಸಲಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆರ್ಥಿಕ ಕೊರತೆ ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಲಲಿತ್ ಮಹಲ್ ಪ್ಯಾಲೇಸ್ ಹೊಟೇಲ್ ಪ್ರದೇಶದಲ್ಲಿ 50 ಎಕರೆ ಜಾಗವಿದ್ದು, ಅಲ್ಲಿ ಮಧ್ಯಪ್ರವೇಶ ಮತ್ತು ರಾಜಸ್ಥಾನ ರಾಜ್ಯಗಳ ಮಾದರಿಯಲ್ಲಿ ಟೆಂಟ್ ನಿರ್ಮಿಸಲು ಅವಕಾಶ ನೀಡಲಾಗುವುದು' ಎಂದು ವಿವರಿಸಿದರು.
ಪ್ರಸ್ತುತ ಈ ಹೊಟೇಲ್‍ನಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ಕೊಠಡಿಗಳು ಹಾಗೂ ಇರುವ ಜಾಗವೂ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೊಠಡಿಗಳ ಅಗತ್ಯವಿದೆ. ಹೀಗಾಗಿ ಹೊಟೇಲ್‍ಗೆ ಜಾಗತಿಕ ಟೆಂಡರ್ ಆಹ್ವಾನಿಸಲು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಆನಂದ್ ಸಿಂಗ್ ಮಾಹಿತಿ ನೀಡಿದರು.
ಅಂಜನಾದ್ರಿ ಬೆಟ್ಟಕ್ಕೆ ಮೂಲ ಸೌಲಭ್ಯ:
‘ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹಿತ ಮೂಲಭೂತ ಸೌಕರ್ಯ ಕಲ್ಪಿಸಲು 240 ಕೋಟಿ ರೂ.ಅನುದಾನ ನೀಡಲು ತೀರ್ಮಾನಿಸಿದ್ದು, ಹೊಸಳ್ಳಿಯಿಂದ ಹಿಡಿದು ಅಂಜನಾದ್ರಿ ಬೆಟ್ಟದವರೆಗೆ ರಾಷ್ಟ್ರೀಯ ಹೆದ್ದಾರಿ-13ನ್ನು ಅಭಿವೃದ್ಧಿಗೆ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.
-ಆನಂದ್ ಸಿಂಗ್ ಪ್ರವಾಸೋದ್ಯಮ ಸಚಿವ







