ಅನಧಿಕೃತ ಜಾನುವಾರುಗಳ ವಧೆ, ಸಾಗಾಣಿಕೆ ನಿಷೇಧ: ಉಡುಪಿ ಜಿಲ್ಲಾಧಿಕಾರಿ
ಬಕ್ರೀದ್ ಕುರಿತು ಸಭೆ

ಉಡುಪಿ: ಜಿಲ್ಲೆಯಲ್ಲಿ ಜುಲೈ10ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆಯಡಿ ವಿವಿಧ ತಂಡಗಳನ್ನು ರಚಿಸಿ, ಕಣ್ಗಾವಲು ಇರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಬಕ್ರೀದ್ ಆಚರಣೆ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ರಚಿಸಿರುವ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಾದ್ಯಂತ ಇರುವ ಚೆಕ್‌ಪೋಸ್ಟ್‌ಗಳಲ್ಲಿ ಅನಧಿಕೃತವಾಗಿ ಜಾನುವಾರು ಗಳ ಸಾಗಾಣಿಕೆ ಆಗದಂತೆ ನಿಗಾ ಇರಿಸುವಂತೆ ಸೂಚಿಸಿದ ಅವರು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ತಿಳಿಸಿದರು.
ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ವಶಪಡಿಸಿ ಕೊಂಡಲ್ಲಿ ಅವುಗಳ ರಕ್ಷಣೆಗಾಗಿ ಗುರುತಿಸಿದ ಗೋಶಾಲೆಗಳಲ್ಲಿ ಸಂರಕ್ಷಣೆ ಮಾಡುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದರು. ಗೋಹತ್ಯೆಗೆ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಪೋಲೀಸ್ ಠಾಣೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು.
ಬಕ್ರೀದ್ ಧಾರ್ಮಿಕ ಆಚರಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ಲೋಪವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಂಕರ್ ಶೆಟ್ಟಿ ಹಾಗೂ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.