ಉಪ್ಪೂರು: ಶಾಲೆ, ಭಜನಾ ಮಂದಿರ, ಮನೆಗಳು ಜಲಾವೃತ

ಉಡುಪಿ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಪ್ಪೂರು ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ನೆರೆ ಉಂಟಾಗಿದ್ದು, ಇದರಿಂದ ಶಾಲೆ, ಭಜನಾ ಮಂದಿ ಹಾಗೂ ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ.
ಸ್ವರ್ಣಾ ನದಿ ನೀರಿನ ಮಟ್ಟ ಹೆಚ್ಚಳದ ಪರಿಣಾಮ ಉಪ್ಪೂರಿನ ಸರಕಾರಿ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತಗೊಂಡಿದೆ. ಶಾಲೆಯ ಆವರಣದ ಒಳಗಡೆ ನದಿ ನೀರು ತುಂಬಿದೆ. ಇದರಿಂದ ಶೌಚಾಲಯದೊಳಗೆ ನೀರು ನಿಂತಿರುವುದು ಕಂಡುಬಂದಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಶಾಲೆ ಪ್ರತಿವರ್ಷ ನೆರೆ ಹಾವಳಿಯನ್ನು ಎದುರಿಸುತ್ತಿದೆ. ಅದೇ ರೀತಿ ಶಾಲೆಯ ಸುತ್ತಮುತ್ತಲು ಇರುವ ಹಲವು ಮನೆಗಳು ಮತ್ತು ಭಜನಾ ಮಂದಿರಕ್ಕೂ ನೆರೆ ನೀರು ನುಗ್ಗಿವೆ. ಅಲ್ಲದೆ ಸಮೀಪದ ನೂರಾರು ಎಕರೆ ಕೃಷಿಭೂಮಿ ಕೂಡ ಜಲಾವೃತಗೊಂಡಿರುವುದು ತಿಳಿದುಬಂದಿದೆ.
ಬೆಳಗ್ಗೆ ಸುರಿದ ಭಾರೀ ಮಳೆಯಿಂದಾಗಿ ಬ್ರಹ್ಮಾವರ ತಾಲೂಕಿನ ಬಾರಕೂರು ಪೇಟೆಯ ಮುಖ್ಯರಸ್ತೆಯಲ್ಲೇ ನೀರು ಹರಿದು ಹೋಗುತ್ತಿರುವುದು ಕಂಡು ಬಂದಿದೆ. ಇದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು.
