ಭಟ್ಕಳ ತಾಲೂಕಿನಲ್ಲಿ ಭಾರೀ ಮಳೆ; ಅಪಾರ ನಷ್ಟ

ಭಟ್ಕಳ: ಗುರುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಟ್ಕಳ ತಾಲೂಕಿನಲ್ಲಿ ಅಪಾರ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದರೂ ಮಧ್ಯರಾತ್ರಿಯಿಂದ ಒಂದೇ ಸವನೆ ಜೋರಾಗಿ ಬರಲಾರಂಭಿಸಿದ್ದರಿಂದ ಅನೇಕ ಕಡೆಗಳಲ್ಲಿ ಮನೆಯೊಳಕ್ಕೆ ನೀರು ನುಗ್ಗಿ ಮನೆಯವರೆಲ್ಲರೂ ಆತಂಕದಿಂದ ದಿನ ಕಳೆಯುವಂತೆ ಆಗಿದೆ.
ನಗರದ ಚೌಥನಿಯಲ್ಲಿ ಹೊಳೆಯು ಉಕ್ಕಿ ಹರಿಯಲಾರಂಭಿಸಿದ್ದು ಸೇತುವೆ ಮುಳುಗಡೆಯಾಯಿತು. ಕುದ್ರೆಬೀರಪ್ಪ ದೇವಸ್ಥಾನ ಅರ್ಧದಷ್ಟು ಮುಳುಗಿದ್ದು ಮುಂಡಳ್ಳಿ ಸಂಪರ್ಕವೇ ಕಡಿತಗೊಂಡಿತು. ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಹೊಳೆದಂಡೆಯಲ್ಲಿರುವ ಅಪಾಯದ ಅಂಚಿನ ಮನೆಗಳಲ್ಲಿ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಯಿತು. ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದಾವೃತವಾಗಿದ್ದು ಕಿ.ಮಿ. ಗಟ್ಟಲೆ ಎಲ್ಲಿ ನೋಡಿದರೂ ನೀರೇ ಕಾಣುತ್ತಿದ್ದು ಜನ ಭಯಭೀತರಾಗಿದ್ದಾರೆ. ತಾಲೂಕಿನ ಬೈಲೂರಿನಿಂದ ಗೊರ್ಟೆಯ ತನಕ ರೈತರ ಗದ್ದೆಗಳು, ತೋಟ ಸಂಪೂರ್ಣ ಜಲಾವೃತವಾಗಿದ್ದರೆ ಹಲವು ಕಡೆಗಳಲ್ಲಿ ಗದ್ದೆಯಲ್ಲಿ ನಾಟಿ ಮಾಡಿದ ಸಸಿಗಳು ಕೊಳೆತು ಹೋಗುವ ಭೀತಿ ರೈತರದ್ದಾಗಿದೆ.
ಮಾರುತಿ ನಗರ, ಮಣ್ಕುಳಿ, ಮುಖ್ಯ ರಸ್ತೆ, ರಂಗೀಕಟ್ಟೆ, ಕೋಗ್ತಿ ನಗರ ಇತ್ಯಾದಿ ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದೇ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ರಂಗೀಕಟ್ಟೆಯಲ್ಲಿ ನೀರು ಹೋಗಲು ವ್ಯವಸ್ಥೆಯೇ ಇಲ್ಲದೇ ವಿಠಲ ಪ್ರಭು ಎನ್ನುವವರ ಮನೆಯೊಳಗೆ ರಾತ್ರಿ ೨ ಗಂಟೆಯ ಸಮಯ ಸುಮಾರು ಎರಡು ಅಡಿಗಳಷ್ಟು ನೀರು ನಿಂತು ಅನೇಕ ವಸ್ತುಗಳು ನೀರಿನಿಂದ ಒದ್ದೆಯಾಗಿದೆ. ಪ್ರತಿ ವರ್ಷವೂ ಕೂಡಾ ಇದೇ ಗೋಳು ಎನ್ನುವುದು ಮನೆಯವರ ಆಕ್ರೋಶ.
"ಗುರುವಾರ ರಾತ್ರಿ ಬಿದ್ದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಚೌಥನಿಯಲ್ಲಿ ರಾತ್ರಿ 3 ಗಂಟೆಯ ಸುಮಾರಿಗೆ ನೀರು ಉಕ್ಕಿ ಹರಿದಿರುವುದರಿಂದ ಆತಂಕವ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಭೇಟಿ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು ನೋಡಲ್ ಅಧಿಕಾರಿ ದೇವಿದಾಸ ಮೊಗೇರ ಸ್ಥಳದಲ್ಲಿಯೇ ಯವುದೇ ಅನಾಹುತವಾಗದಂತೆ ಜಾಗೃತೆ ವಹಿಸಿದ್ದಾರೆ. ತಾಲೂಕಿನಲ್ಲಿ ಯಾವುದೇ ಸಂದರ್ಭದಲ್ಲಿ ಜನರ ರಕ್ಷಣೆಗೆ ತಂಡ ಸಿದ್ದವಿದ್ದು ಕಾಳಜಿ ಕೇಂದ್ರಗಳನ್ನು ತೆರೆಯಲು ಕೂಡಾ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ"
-ಡಾ. ಸುಮಂತ್ ಬಿ.ಇ., ತಹಶೀಲ್ದಾರ್, ಭಟ್ಕಳ







.jpeg)

.jpeg)


