ಭಾರತ ಶಾಂತಿಯ ತೋಟವಾಗಲಿ

ಭವ್ಯ ಭಾರತ ನಿರ್ಮಾಣಕ್ಕೆ ಮಾರಕವಾಗಿರುವ ಕ್ರೌರ್ಯವನ್ನು ಬುಡ ಸಮೇತ ಕಿತ್ತೊಗೆಯಲು ಭಾರತೀಯರು ಜಾತಿ, ಧರ್ಮ, ಪಂಗಡ ಬದಿಗಿಟ್ಟು ಶ್ರಮಿಸಬೇಕಾಗಿದೆ.
ಭಾರತದಲ್ಲಿ ರಾಜಕೀಯ, ಭೂ ವಿವಾದ, ವರದಕ್ಷಿಣೆ, ಪ್ರೀತಿ, ಮತಾಂಧತೆ, ಅಸ್ಪಶ್ಯತೆ, ಜಾತಿ ವೈಷಮ್ಯ, ವ್ಯಕ್ತಿಗತ ದ್ವೇಷ, ಅಸೂಯೆ, ಆಸ್ತಿ, ಹಣ, ಹೆಂಡಕ್ಕಾಗಿ ಕ್ರೌರ್ಯಗಳು ನಡೆಯುತ್ತಿವೆ. ಇದನ್ನು ತಡೆಯಲು ಕೇವಲ ಸರಕಾರಗಳು ಕ್ರಮಗಳನ್ನು ಕೈಗೊಂಡರೆ ಸಾಲದು, ಕ್ರೌರ್ಯಮುಕ್ತ ಭಾರತಕ್ಕಾಗಿ ಎಲ್ಲಾ ಜಾತಿ ಧರ್ಮಗಳ ಮಠಾಧಿಪತಿಗಳು, ವೌಲ್ವಿಗಳು, ಪೋಪ್‌ಗಳು, ಫಾದರ್‌ಗಳು, ಸಂತರು, ಸಾಧುಗಳು, ಕಲಾವಿದರು, ಸಾಹಿತಿಗಳು, ನ್ಯಾಯವಾದಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು ಸಂಘಟಿತ ಪ್ರಯತ್ನ ಮಾಡಿದಾಗ ಮಾತ್ರ ಶಾಂತಿ, ಸೌಹಾರ್ದಕ್ಕೆ ಭದ್ರ ಬುನಾದಿ ಹಾಕಲು ಸಾಧ್ಯವಾಗಬಹುದು.
ನಮ್ಮ ದೇಶದಲ್ಲಿ ಹೆಣ್ಣಿಗಾಗಿ, ಹಣಕ್ಕಾಗಿ, ಆಸ್ತಿಗಾಗಿ, ರಾಜಕೀಯ ದ್ವೇಷ ಹಾಗೂ ಇನ್ನಿತರ ಕಾರಣಗಳಿಂದ ನಡೆಯುತ್ತಿದ್ದ ಕೊಲೆಗಳು ಈಗ ಧಾರ್ಮಿಕ ಅಂಧಶ್ರದ್ಧೆ, ದುರಾಭಿಮಾನ, ವಿಕೃತ ಮನಸ್ಸುಗಳಿಂದ ಹಬ್ಬುತ್ತಿರುವ ವದಂತಿ, ಕಾಡ್ಗಿಚ್ಚಿನಂತೆ ಹರಡುವ ಸುಳ್ಳು ಸುದ್ದಿ, ಅಪಪ್ರಚಾರ, ಪ್ರಚೋದನೆ ಇನ್ನಿತರ ಕಾರಣಗಳಿಂದ ದೇಶವ್ಯಾಪಿ ಹಿಂಸಾಚಾರಕ್ಕೆ ಎಡೆ ಮಾಡಿಕೊಡುತ್ತಿದೆ.
ಉತ್ತರದಿಂದ ದಕ್ಷಿಣದವರೆಗೆ:
ಗುಜರಾತ್, ಬಿಹಾರ, ಚತ್ತೀಸ್‌ಗಡ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹರ್ಯಾಣ, ಅಸ್ಸಾಂ, ದಿಲ್ಲಿ, ಜಾರ್ಖಂಡ್ ಇನ್ನಿತರ ಕಡೆ ದಾಖಲಾಗುತ್ತಿದ್ದ ಕ್ರೌರ್ಯ ಪ್ರಕರಣಗಳು ಈಗ ಕರ್ನಾಟಕಕ್ಕೂ ವಿಸ್ತಾರಗೊಳ್ಳುತ್ತಿರುವುದು ದುರ್ದೈವ ಹಾಗೂ ಆತಂಕಕಾರಿ.
2010ರಿಂದ 2022ರ ಜುಲೈವರೆಗಿನ ಎನ್‌ಸಿಆರ್‌ಬಿ (ನ್ಯಾಷನಲ್ ಕ್ರೈಂ ರಿಕಾರ್ಡ್ ಬ್ಯೂರೋ) ಮಾಹಿತಿ ಪ್ರಕಾರ ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕ್ರೌರ್ಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಒಂದಿಷ್ಟು ಕಡಿಮೆ ಎಂಬುದು ಸಮಾಧಾನಕರ ಸಂಗತಿಯಾದರೂ ಇತ್ತೀಚಿನ ವರ್ಷಗಳಲ್ಲಿ ಮತೀಯ ದ್ವೇಷದಿಂದ ನಡೆದಿರುವ ಕೊಲೆಗಳ ಬಗ್ಗೆ ರಾಜ್ಯದ ಸರ್ವ ಧರ್ಮೀಯರೂ ಚಿಂತಿಸಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಬದ್ಧ್ಧತೆ ತೋರಬೇಕಾಗಿದೆ.
ಧಾರ್ಮಿಕ ಮುಖಂಡರ ಜವಾಬ್ದಾರಿ:
ನಮ್ಮ ದೇಶದಲ್ಲಿ ಒಂದೊಂದು ಜಾತಿಗೆ ಒಂದೊಂದು ಮಠಗಳಿವೆ, ಪ್ರತಿಯೊಂದು ಮಠಕ್ಕೆ ಒಬ್ಬರು ಪ್ರಮುಖ ಮಠಾಧಿಪತಿ, ಶಾಖಾಧಿಪತಿಗಳನ್ನು ನೇಮಿಸಲಾಗಿದೆ, ಲಕ್ಷಾಂತರ ಮಸೀದಿ, ದರ್ಗಾ, ಮದರಸಗಳಿದ್ದು ಇವುಗಳಿಗೆ ಸಾವಿರಾರು ಸಂಖ್ಯೆಯಲ್ಲಿ ವೌಲ್ವಿಗಳನ್ನು ನಿಯೋಜಿಸಲಾಗಿದೆ, ಇದೇ ರೀತಿ ನಮ್ಮ ದೇಶದಲ್ಲಿನ ಚರ್ಚ್‌ಗಳಿಗೆ ಫಾದರ್‌ಗಳಿದ್ದಾರೆ, ಇತರ ಸಿಬ್ಬಂದಿಯಿದ್ದಾರೆ, ಸಿಖ್, ಜೈನ, ಬೌದ್ಧ, ಪಾರ್ಸಿ ಮುಂತಾದ ಧರ್ಮಗಳಿಗೂ ಗುರುಗಳಿದ್ದಾರೆ, ಕೋಟ್ಯಂತರ ಮಂದಿ ಭಕ್ತರು, ಅನುಯಾಯಿಗಳು ಇದ್ದಾರೆ. ಇವರೆಲ್ಲ ಕ್ರೌರ್ಯಗಳ ತಡೆಗೆ ಒಂದಾಗಿ ಕೆಲಸ ಮಾಡಬೇಕಾಗಿರುವುದು ಈ ಕಾಲಘಟ್ಟದ ತುರ್ತಾಗಿದೆ.
ಮತಕ್ಕಿಂತ ಮಾನವೀಯತೆ ಮುಖ್ಯ. ತಪ್ಪು ಯಾರೇ ಮಾಡಿದರೂ ಅಪರಾಧಿಗಳ ವಿರುದ್ಧ ಕ್ರಮಕ್ಕೆ ಒಕ್ಕೊರಲ ಒತ್ತಾಯ ಅವಶ್ಯಕ. ತಪ್ಪಿತಸ್ಥರನ್ನು ಸಮರ್ಥನೆ ಮಾಡಿಕೊಳ್ಳುವುದು ಧರ್ಮಕ್ಕೆ ಮತ್ತು ದೇಶಕ್ಕೆ ಮಾಡುವ ಅಪಚಾರವಾಗಿದೆ. ವಿಕೃತ ಮನಸ್ಸುಗಳು ಕ್ರೌರ್ಯವನ್ನು ಬಂಡವಾಳ ಮಾಡಿಕೊಂಡು ದೇಶವನ್ನು ವಿಭಜಿಸಲು ಯತ್ನಿಸುತ್ತಿವೆ. ಈ ಕೆಲಸವನ್ನು ಎಲ್ಲರೂ ಜೊತೆಗೂಡಿ ತಡೆಯಬೇಕಾಗಿದೆ.
ವ್ಯವಸ್ಥಿತ ಸಂಚು:
ಸಮಯ ಸಾಧಕರು ಪ್ರಚಾರಕ್ಕಾಗಿ, ಗಂಜಿ ವ್ಯವಸ್ಥೆಗಾಗಿ ಕಪಟ ರಾಜಕಾರಣಿಗಳ ಪರವಾಗಿ ಬಕೆಟ್ ಹಿಡಿಯುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ, ನಾಜೂಕಾಗಿ ಮಾಡುವ ಮೂಲಕ ಕ್ರೌರ್ಯಗಳ ಪ್ರಮಾಣ ಹೆಚ್ಚಿಸುತ್ತಿದ್ದಾರೆ. ಇಂತಹವರಿಗೆ ಸರಕಾರ ಲಗಾಮು ಹಾಕುವುದಕ್ಕೆ ರಾಜಕೀಯ ಅಡ್ಡಗಾಲಾಗಿದೆ. ಇದರ ಪರಿಣಾಮ ಅಮಾಯಕರು ಬಲಿಯಾಗುತ್ತಿದ್ದಾರೆ, ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಯುವಕರನ್ನು ಜಾತಿ, ಮತದ ಹೆಸರಲ್ಲಿ ತಮ್ಮ ಕಡೆ ಸೆಳೆದು ದೇಶದ ಐಕ್ಯತೆ, ಸಮಗ್ರತೆಗೆ ಭಂಗವನ್ನುಂಟು ಮಾಡಲಾಗುತ್ತಿದೆ, ಕ್ರೌರ್ಯಗಳ ವಿರುದ್ಧ ಸಮರ ಸಾರಬೇಕಾದ ಧಾರ್ಮಿಕ ಮುಖಂಡರು, ಮಠಾಧಿಪತಿಗಳು ಸರಕಾರದಿಂದ ಹೆಚ್ಚಿನ ಸೌಲಭ್ಯ, ರಾಜಕೀಯ ಪ್ರಾತಿನಿಧ್ಯತೆಗಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಹೊರತು ಜನರಲ್ಲಿ ಅರಿವು ಮೂಡಿಸಲು, ಸಾಮರಸ್ಯ, ಸೌಹಾರ್ದ ಕಾಪಾಡಲು ಚಿಂತನೆ ನಡೆಸುತ್ತಿಲ್ಲ ಎನ್ನುವುದು ವಿಷಾದನೀಯ. ಅಲ್ಲದೆ ಸ್ವಾರ್ಥಕ್ಕೆ ರಥಯಾತ್ರೆ, ಪಾದಯಾತ್ರೆ, ಸಮಾವೇಶ, ಸಮ್ಮೇಳನ, ರ್ಯಾಲಿಗಳನ್ನು ಆಯೋಜಿಸುವ ಜನರು ಭಾರತವನ್ನು ಬಲಿಷ್ಠಗೊಳಿಸಲು ಮುನ್ನುಡಿ ಬರೆಯದಿರುವುದು ಕ್ರೌರ್ಯಕ್ಕಿಂತ ದೊಡ್ಡ ದುರಂತವೆಂದರೆ ತಪ್ಪಾಗಲಾರದು.
ಶಾಂತಿ-ಸೌಹಾರ್ದದೆಡೆಗೆ:
ಇನ್ನು ಕಾಲ ಮಿಂಚಿಲ್ಲ, ವಿಚ್ಛಿದ್ರಕಾರಕ ಶಕ್ತಿಗಳನ್ನು ಮಟ್ಟಹಾಕಲು, ಮಾನವನ ತಲೆ ಉರುಳುವುದನ್ನು ತಪ್ಪಿಸಲು ಭಾರತದಾದ್ಯಂತ ಇರುವ ಎಲ್ಲಾ ಧರ್ಮಗಳ ಮುಖಂಡರು ವಿಶೇಷ ಬೈಠಕ್ ಆಯೋಜಿಸಿ ದೇಶವನ್ನು ಶಾಂತಿಯ ತೋಟವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆೆ.
ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಲು ಯತ್ನಿಸುವ ಯಾರೇ ಆಗಿರಲಿ ಆಳುವ ಸರಕಾರಗಳು ರಾಜಕೀಯ ಬದಿಗಿಟ್ಟು ದುರುಳರನ್ನು ಮಟ್ಟಹಾಕಲು ಧೈರ್ಯ ತೋರಬೇಕು. ಮತೀಯ ಗಲಭೆಗಳಿಗೆ ಕಾರಣರಾಗುವವರಿಗೆ ಆಜೀವ ಪರ್ಯಂತ ಜೈಲು ವಾಸದ ಶಿಕ್ಷೆ ಆಗುವ ರೀತಿಯಲ್ಲಿ ಐಪಿಸಿಗೆ ತಿದ್ದುಪಡಿ ತರಬೇಕು.
ಪ್ರತೀ 500ರಿಂದ 1,000 ಮಂದಿ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಕನಿಷ್ಠ 10 ದಿನಕ್ಕೆ ಒಮ್ಮೆ ಸಾರ್ವಜನಿಕ ಸಂಪರ್ಕ ಸಭೆಯನ್ನು ಕಡ್ಡಾಯವಾಗಿ ನಡೆಸಿ, ಸಮಾಜ ಘಾತುಕ ಶಕ್ತಿಗಳು ತಲೆ ಎತ್ತದಂತೆ ಎಲ್ಲಾ ವರ್ಗದ ಜನರನ್ನು ಒಳಗೊಂಡ ಸಾಮರಸ್ಯ, ಸೌಹಾರ್ದ ಸಮಿತಿಗಳನ್ನು ರಚಿಸಬೇಕು. ಭಾರತದ ಅಖಂಡತೆ, ಸಮಗ್ರತೆ, ಐಕ್ಯತೆಯನ್ನು ಉಳಿಸಲು ಯುವಕರಿಗೆ ಸರಕಾರ ವಿಶೇಷ ತರಬೇತಿ, ಮಾರ್ಗದರ್ಶನ, ಮನ ಪರಿವರ್ತನೆಯ ಶಿಬಿರಗಳನ್ನು ಆಯೋಜಿಸಬೇಕು. ಅಪರಾಧಿಗಳ ಪರವಾಗಿ ವಕಾಲತ್ತು ವಹಿಸುವ ರಾಜಕಾರಣಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಠಿಣ ಕಾನೂನು ಜಾರಿಗೆ ತರಬೇಕಾಗಿದೆ.







