ಉದಯಪುರ ಹತ್ಯೆ ವೈಭವೀಕರಿಸುವ ವೀಡಿಯೊವನ್ನು ತೆಗೆದುಹಾಕಿದ ಫೇಸ್ಬುಕ್

Photo:twitter
ಉದಯಪುರ: ಸ್ಥಳೀಯ ಪೊಲೀಸರ ಕೋರಿಕೆಯ ಮೇರೆಗೆ ಸಾಮಾಜಿಕ ಮಾಧ್ಯಮ ತಾಣ ಫೇಸ್ಬುಕ್ ಉದಯಪುರ ಹತ್ಯೆಯನ್ನು ವೈಭವೀಕರಿಸುವ ವೀಡಿಯೊವನ್ನು ತೆಗೆದುಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೀಡಿಯೊ ಇತ್ತೀಚೆಗೆ ಫೇಸ್ಬುಕ್ ಪೇಜ್ನಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಮಂದಿ ಇದನ್ನು ಬೆಂಬಲಿಸಿದ್ದಾರೆ ಎನ್ನಲಾಗಿದೆ.
ಉದಯ್ಪುರದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ವೀಡಿಯೊವನ್ನು ತೆಗೆದುಹಾಕುವಂತೆ ಕೋರಿ ಪೊಲೀಸರು ಫೇಸ್ಬುಕ್ಗೆ ಪತ್ರ ಬರೆದಿದ್ದು, ವಿಡಿಯೋವನ್ನು ತಕ್ಷಣವೇ ತೆಗೆದು ಹಾಕಲಾಗಿದೆ ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ.
ವೀಡಿಯೊ ಅಪ್ಲೋಡ್ ಮಾಡಿದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಕಾಸ್ ಶರ್ಮಾ ಹೇಳಿದರು.
ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಕುರಿತ ವಿವಾದಾತ್ಮಕ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದ ಪೋಸ್ಟ್ಗೆ ಸಂಬಂಧಿಸಿದಂತೆ 46 ವರ್ಷದ ಕನ್ಹಯ್ಯಾ ಲಾಲ್ ಎಂಬವರನ್ನು ಜೂನ್ 28 ರಂದು ಉದಯಪುರದ ಅವರ ಟೈಲರಿಂಗ್ ಅಂಗಡಿಯಲ್ಲಿ ಹತ್ಯೆಗೈಯ್ಯಲಾಗಿತ್ತು.
ಲಾಲ್ ಹತ್ಯೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.







