ನಟ ವಿಕ್ರಮ್ ಗೆ ಹೃದಯಾಘಾತವಾಗಿಲ್ಲ,ಮಾಧ್ಯಮ ವರದಿ ಸುಳ್ಳು: ಪುತ್ರ ಧ್ರುವ ಸ್ಪಷ್ಟನೆ
Photo:twitter
ಚೆನ್ನೈ: ತಮಿಳಿನ ಖ್ಯಾತ ನಟ ವಿಕ್ರಮ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರಿಗೆ ಹೃದಯಾಘಾತವಾಗಿಲ್ಲ ಎಂದು ವಿಕ್ರಮ್ ಅವರ ಪುತ್ರ ಧ್ರುವ ಸ್ಪಷ್ಟಪಡಿಸಿದ್ದಾರೆ.
56 ರ ವಯಸ್ಸಿನ ನಟ ವಿಕ್ರಮ್ 'ಪೊನ್ನಿಯಿನ್ ಸೆಲ್ವನ್' ಚಿತ್ರ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲ ಸಮಯದ ಬಳಿಕ ಅನಾರೋಗ್ಯದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.
ವಿಕ್ರಮ್ ಅವರಿಗೆ ತೀವ್ರ ಜ್ವರ ಹಾಗೂ ಸಣ್ಣ ಪ್ರಮಾಣದ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಅವರಿಗೆ ಹೃದಯಾಘಾತವಾಗಿದೆ ಎಂದು ಕೆಲ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸುಳ್ಳು ಎಂದು ವಿಕ್ರಮ್ ಪುತ್ರ ಧ್ರುವ ಸ್ಪಷ್ಟಪಡಿಸಿದ್ದಾರೆ. ಅಂತಹ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.
"ಆತ್ಮೀಯ ಅಭಿಮಾನಿಗಳೇ ಮತ್ತು ಹಿತೈಷಿಗಳೇ, ತಂದೆಗೆ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಇತ್ತು ಹಾಗೂ ಅದಕ್ಕಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮಾಧ್ಯಮಗಳ ವರದಿಯಂತೆ ಅವರಿಗೆ ಹೃದಯಾಘಾತವಾಗಿಲ್ಲ. ಇಂತಹ ವದಂತಿಗಳನ್ನು ಕೇಳಲು ನಮಗೆ ನೋವಾಗುತ್ತಿದೆ.
ಈ ಸಮಯದಲ್ಲಿ ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನಮ್ಮ ಕುಟುಂಬಕ್ಕೆ ನೀಡುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ನಮ್ಮ ಚಿಯಾನ್ ಈಗ ಚೆನ್ನಾಗಿದ್ದಾರೆ. ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಈ ಹೇಳಿಕೆಯು ಸ್ಪಷ್ಟತೆಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಹಾಗೂ ಸುಳ್ಳು ವದಂತಿಗಳನ್ನು ಕೊನೆಗೊಳಿಸಲಾಗುವುದು ಎಂದು ನಂಬುತ್ತೇವೆ’’ಎಂದು ಹೇಳಿಕೆಯೊಂದರಲ್ಲಿ ಧ್ರುವ ತಿಳಿಸಿದ್ದಾರೆ.