ಉಡುಪಿ | ಬ್ರಹ್ಮಗಿರಿಯಲ್ಲಿ ರಸ್ತೆಗೆ ಬಿದ್ದ ಮರ: ದ್ವಿಚಕ್ರ ವಾಹನ ಸವಾರನಿಗೆ ಗಾಯ, ಕಾರು ಜಖಂ

ಉಡುಪಿ, ಜು.9: ಭಾರೀ ಗಾಳಿಮಳೆಯಿಂದ ಬ್ರಹ್ಮಗಿರಿ ಸಮೀಪ ಇಂದು ಮಧ್ಯಾಹ್ನ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಬುಲೆಟ್ ಬೈಕ್ ಸವಾರ ಗಾಯಗೊಂಡು, ಕಾರೊಂದು ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.
ಬ್ರಹ್ಮಗಿರಿಯಿಂದ ಅಂಬಲಪಾಡಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಈ ಮರ ಭಾರೀ ಗಾಳಿಮಳೆಗೆ ರಸ್ತೆಗೆ ಬಿದ್ದಿದ್ದು, ಇದರಿಂದ ಬುಲೆಟ್ ಸವಾರರೊಬ್ಬರು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.