ಶ್ರೀಲಂಕಾ ಬಿಕ್ಕಟ್ಟು ಉಲ್ಬಣ: ಸಾವಿರಾರು ಪ್ರತಿಭಟನಾಕಾರರಿಂದ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ
ತಕ್ಷಣವೇ ರಾಜೀನಾಮೆ ನೀಡುವಂತೆ ಅಧ್ಯಕ್ಷ ಗೋತಬಯಗೆ 16 ಸಂಸದರ ಒತ್ತಾಯ

Twitter/@SriLankaTweet
ಹೊಸದಿಲ್ಲಿ: ಕೊಲಂಬೊದಲ್ಲಿ ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ಗಳನ್ನು ಭೇದಿಸಿ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಇಂದು ಮುತ್ತಿಗೆ ಹಾಕಿದರು. ಹಿಂದೆಂದೂ ಕಂಡರಿಯದ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ 22 ಮಿಲಿಯನ್ ಜನಸಂಖ್ಯೆಯ ದ್ವೀಪ ರಾಷ್ಟ್ರದ ಜನರ ಆಕ್ರೋಶದ ಕಟ್ಟೆ ಒಡೆದಿದೆ.
ಪ್ರತಿಭಟನಾಕಾರರು ಹಾಗೂ ಪೊಲೀಸರು ಘರ್ಷಣೆ ನಡೆಸಿದ್ದರಿಂದ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ ಎಂಬ ಗುಪ್ತಚರ ವರದಿಗಳ ನಂತರ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರನ್ನು ಕಳೆದ ರಾತ್ರಿ ಸೇನಾ ಪ್ರಧಾನ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಸರಕಾರದ ಉನ್ನತ ಮೂಲವೊಂದು ಎನ್ಡಿಟಿವಿಗೆ ತಿಳಿಸಿದೆ.
ಶ್ರೀಲಂಕಾ ಪೊದುಜನ ಪೆರಮುನ (ಎಸ್ ಎಲ್ ಪಿಪಿ) ಯ ಹದಿನಾರು ಸಂಸತ್ ಸದಸ್ಯರು ತಕ್ಷಣವೇ ರಾಜೀನಾಮೆ ನೀಡುವಂತೆ ಅಧ್ಯಕ್ಷರನ್ನು ವಿನಂತಿಸಿದ್ದಾರೆ. ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ವಿರೋಧ ಪಕ್ಷಗಳು, ಹಕ್ಕುಗಳ ಕಾರ್ಯಕರ್ತರು ಹಾಗೂ ಬಾರ್ ಅಸೋಸಿಯೇಷನ್ನ ಕಾನೂನು ಸವಾಲಿನ ನಂತರ ಪೊಲೀಸರು ಕರ್ಫ್ಯೂ ಆದೇಶವನ್ನು ಹಿಂತೆಗೆದುಕೊಂಡರು. ಆ ಬಳಿಕ ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್ಗಳನ್ನು ಹಿಡಿದು ಸಾವಿರಾರು ಪ್ರತಿಭಟನಾಕಾರರು ಇಂದು ಬೆಳಿಗ್ಗೆ ಅಧ್ಯಕ್ಷರ ಅಧಿಕೃತ ನಿವಾಸವನ್ನು ಸುತ್ತುವರೆದರು.