ಟ್ವಿಟ್ಟರ್ ಖರೀದಿ ಡೀಲ್‍ನಿಂದ ಹಿಂದೆ ಸರಿದ ಇಲಾನ್ ಮಸ್ಕ್; ಕಾನೂನು ಸಮರದ ಎಚ್ಚರಿಕೆ ನೀಡಿದ ಸಂಸ್ಥೆ

ನ್ಯೂಯಾರ್ಕ್, ಜು.9: ಟ್ವಿಟರ್ ಸಂಸ್ಥೆಯನ್ನು 44 ಬಿಲಿಯನ್ ಡಾಲರ್ ಬೃಹತ್ ಮೊತ್ತಕ್ಕೆ ಖರೀದಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಉದ್ಯಮಿ ಎಲಾನ್ ಮಸ್ಕ್ ಶುಕ್ರವಾರ ಘೋಷಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಟ್ವಿಟರ್, ಮಸ್ಕ್ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದೆ.
ನಕಲಿ ಖಾತೆಗಳ ಬಗ್ಗೆ ಟ್ವಿಟರ್ ಸಾಕಷ್ಟು ಮಾಹಿತಿ ಒದಗಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಒಪ್ಪಂದ ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಟೆಸ್ಲಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ವಿಶ್ವದ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಅತ್ಯಂತ ಪ್ರಭಾವಶಾಲೀ ಸಾಮಾಜಿಕ ಮಾಧ್ಯಮದ ನಡುವಿನ ವ್ಯವಹಾರ ಮತ್ತೊಂದು ತಿರುವು ಪಡೆದಿದ್ದು, ಮುಂದಿನ ದಿನದಲ್ಲಿ ಬೃಹತ್ ಕಾನೂನು ಸಮರವಾಗಿ ಮಾರ್ಪಡುವ ಸಾಧ್ಯತೆಯಿದೆ.
ಒಪ್ಪಂದ ಉಲ್ಲಂಘಿಸಿದರೆ ಮಸ್ಕ್ 1 ಬಿಲಿಯನ್ ಡಾಲರ್ ದಂಡ ಪಾವತಿಸುವ ಬಗ್ಗೆ ಕರಾರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಮಸ್ಕ್ ದಂಡ ಪಾವತಿಸುವುದು ಬೇಡ, ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಸಂಸ್ಥೆಯನ್ನು ಖರೀದಿಸಬೇಕು ಎಂಬ ವಾದವನ್ನು ಮುಂದಿಟ್ಟಿಕೊಂಡು ಕಾನೂನು ಸಮರಕ್ಕೆ ಟ್ವಿಟರ್ ನಿರ್ಧರಿಸಿದೆ.
ಟ್ವಿಟರ್ ವೇದಿಕೆಯಲ್ಲಿ ಅನಪೇಕ್ಷಿತ ಮತ್ತು ನಕಲಿ ಖಾತೆಗಳ ಬಗ್ಗೆ ನಮ್ಮ ಗ್ರಾಹಕರು ಕಳೆದ 2 ತಿಂಗಳಿಂದ ಕೋರಿದ್ದರು . ಆದರೆ ಇದಕ್ಕೆ ಟ್ವಿಟರ್ ವಿಫಲವಾಗಿದೆ ಅಥವಾ ನಿರಾಕರಿಸಿದೆ. ಕೆಲವೊಮ್ಮೆ ಮಸ್ಕ್ ಅವರ ಕೋರಿಕೆಯನ್ನು ಕಡೆಗಣಿಸಿದೆ, ಕೆಲವೊಮ್ಮೆ ಸಮರ್ಥನೀಯವಲ್ಲದ ರೀತಿಯ ಕಾರಣ ನೀಡಿ ತಿರಸ್ಕರಿಸಿದೆ, ಮತ್ತು ಕೆಲವೊಮ್ಮೆ ಅಪೂರ್ಣ ಅಥವಾ ಪ್ರಯೋಜನಕ್ಕೆ ಬಾರದ ಮಾಹಿತಿ ನೀಡಿದೆ ಎಂದು ಟ್ವಿಟರ್ ನ ಆಡಳಿತ ಮಂಡಳಿಗೆ ಮಸ್ಕ್ ಅವರ ವಕೀಲರು ರವಾನಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಮಾಹಿತಿಗಳು ಟ್ವಿಟರ್ ನ ವ್ಯವಹಾರ ಮತ್ತು ಹಣಕಾಸಿನ ಕಾರ್ಯಕ್ಷಮತೆಗೆ ಆಧಾರವಾಗಿವೆ ಮತ್ತು ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯವಾಗಿದೆ ಎಂದು ಮಸ್ಕ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟರ್ ಮಂಡಳಿಯ ಅಧ್ಯಕ್ಷ ಬ್ರೆಟ್ ಟೇಲರ್, ಮಸ್ಕ್ ಅವರೊಂದಿಗೆ ಒಪ್ಪಿಕೊಂಡ ದರ ಮತ್ತು ಷರತ್ತಿಗೆ ಅನುಗುಣವಾಗಿ ಈ ವ್ಯವಹಾರವನ್ನು ಪೂರ್ಣಗೊಳಿಸಲು ಆಡಳಿತ ಮಂಡಳಿ ಬದ್ಧವಾಗಿದೆ. ವಿಲೀನ ಒಪ್ಪಂದ ಅನುಷ್ಟಾನಕ್ಕೆ ಕಾನೂನು ಕ್ರಮವನ್ನು ಮುಂದುವರಿಸಲು ಯೋಜಿಸಿದೆ ಎಂದಿದ್ದಾರೆ.ಈ ಮಧ್ಯೆ, ಮಸ್ಕ್ ಘೋಷಣೆ ಹೊರಬಿದ್ದೊಡನೆ ಶೇರ್ ಮಾರ್ಕೆಟ್ನಲ್ಲಿ ಟ್ವಿಟರ್ ನ ಶೇರುಗಳ ದರದಲ್ಲಿ 5% ಕುಸಿತ ಮತ್ತು ಟೆಸ್ಲಾದ ಶೇರುಗಳ ದರದಲ್ಲಿ 2.5% ಹೆಚ್ಚಳ ದಾಖಲಾಗಿದೆ.