'ಸಿದ್ದರಾಮೋತ್ಸವ'ದ ಬಳಿಕ ಕಾಂಗ್ರೆಸ್ ಇಬ್ಭಾಗ, ಬಿಜೆಪಿಗೆ ಮತ್ತೆ ಅಧಿಕಾರ: ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಹಾಸನದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕುರ್ಚಿಗಾಗಿ ಒಳಜಗಳ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ಮುಂದಿನ ಚುನಾವಣೆಯಲ್ಲಿ ಸಿದ್ರಾಮಣ್ಣನ ಗುಂಪು ಡಿಕೆಶಿ ಗುಂಪನ್ನು ಮತ್ತು ಡಿಕೆಶಿ ಗುಂಪು ಸಿದ್ರಾಮಣ್ಣನ ಅಭ್ಯರ್ಥಿಗಳನ್ನು ಸೋಲಿಸಲಿದ್ದಾರೆ. ಬಿಜೆಪಿ ವಿಕಾಸವಾದದ ಮೂಲಕ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
60 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಯಾವ ರೈತನ ಖಾತೆಗೂ ಅದು ನೇರವಾಗಿ ಹಣ ಹಾಕಲಿಲ್ಲ. ಹಳ್ಳಿಯ ತಾಯಂದಿರಿಗೆ ಅನಿಲ ಭಾಗ್ಯ ಕೊಟ್ಟಿರಲಿಲ್ಲ. ಅವರ ಖಾತೆಗೆ ಹಣ ಹಾಕಿರಲಿಲ್ಲ. ಇವತ್ತು ಮನೆ ಮನೆಗೆ ಬ್ಯಾಂಕ್ ಖಾತೆ, ಶೌಚಾಲಯ ಸೌಲಭ್ಯ, ಮನೆ ಮನೆಗೆ ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ಆಯುಷ್ಮಾನ್ ಯೋಜನೆ ಮೂಲಕ ಆರೋಗ್ಯ ಭಾಗ್ಯವನ್ನು ನರೇಂದ್ರ ಮೋದಿಯವರ ಸರಕಾರ ಕೊಟ್ಟಿದೆ. ಮನೆ ಮನೆಗೂ ಅದು ನೀರನ್ನು ನೀಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹಿಂದುಳಿದವರನ್ನು ಮುಂದೆ ತರುವ ಕೆಲಸವನ್ನು ಮೋದಿ ಸರಕಾರ ಮಾಡಿದೆ ಎಂದ ಅವರು, ಹಿಂದಿನ ಕಾಂಗ್ರೆಸ್ ಸರಕಾರ ತುಷ್ಟೀಕರಣದ ರಾಜಕೀಯವನ್ನು ತನ್ನದಾಗಿಸಿಕೊಂಡಿತ್ತು ಎಂದು ವಿವರಿಸಿದರು. ತಿರಂಗಾ ಧ್ವಜಕ್ಕೆ ಜಗತ್ತೇ ಗೌರವ ನೀಡುವ ಕಾಲಘಟ್ಟ ಬಂದಿದೆ ಎಂದರು. ಪಠ್ಯಪುಸ್ತಕದಲ್ಲಿ ಯಾವುದೇ ಮಹಾನ್ ವ್ಯಕ್ತಿಯನ್ನೂ ಕಡೆಗಣಿಸಿಲ್ಲ. ಎಲ್ಲ ಸಮುದಾಯಕ್ಕೂ ಅದು ಗೌರವ ನೀಡಿದೆ ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ನಡೆದಿದೆ. ಕೇದಾರನಾಥ ಜೀರ್ಣೋದ್ಧಾರ ನಡೆಯುತ್ತಿದೆ. ಅಮರನಾಥದ ಕಾರ್ಯ ನಡೆದಿದೆ. ಯೋಗಕ್ಕೆ ಜಗತ್ತಿನ ಮನ್ನಣೆ ಸಿಕ್ಕಿದೆ ಎಂದು ತಿಳಿಸಿದರು. ಆಯುರ್ವೇದಕ್ಕೆ ದೇಶ ಮತ್ತು ವಿದೇಶಗಳಲ್ಲಿ ಮನ್ನಣೆ ಸಿಗುತ್ತಿದೆ ಎಂದರು. ಭಾರತೀಯ ಸಂಸ್ಕøತಿಯನ್ನು ವಿಶ್ವದ ಎತ್ತರಕ್ಕೆ ಕೊಂಡೊಯ್ಯುವ ಕಾರ್ಯವನ್ನು ತುಷ್ಟೀಕರಣದ ನೀತಿಯನ್ನು ಹೊರಗಿಟ್ಟು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿಯ ವಿಕಾಸವಾದದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ಕಾಂಗ್ರೆಸ್‍ನ ವಿನಾಶವಾದ, ಭ್ರಷ್ಟಾಚಾರವಾದದಿಂದ ಆ ಪಕ್ಷದ ಬಗ್ಗೆ ತಿರಸ್ಕಾರ ಹೆಚ್ಚಾಗಿದೆ. ಪರಿವಾರವಾದ, ಕುಟುಂಬವಾದವನ್ನು ಹೊರಗಿಟ್ಟು ಬಿಜೆಪಿ ವಿಕಾಸವಾದವನ್ನು ಮುಂದಿಡುತ್ತಿದೆ. ವಿಕಾಸವಾದ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.







