ಬಿಜೆಪಿ ಹಾಗೂ ಭಯೋತ್ಪಾದಕರ ನಡುವೆ ನಿಕಟ ಸಂಪರ್ಕದ ಬಗ್ಗೆ ಮೋದಿ, ಶಾ ಮೌನವೇಕೆ?: ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಜು.9: 'ದೇಶದ ಜನರಿಗೆ ರಾಷ್ಟ್ರೀಯತೆ ಪಾಠ ಮಾಡುವ ಬಿಜೆಪಿ, ದೇಶ ವಿರೋಧಿ ಭಯೋತ್ಪಾದಕರ ಜತೆಗೆ ನಿಕಟ ಸಂಪರ್ಕ ಹೊಂದಿರುವುದು ಹಲವು ಬಾರಿ ಸಾಬೀತಾಗಿದೆ. ಆದರೂ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಗೃಹ ಸಚಿವ ಅಮಿತ್ ಶಾ ಅವರಾಗಲಿ ಈ ವಿಚಾರವಾಗಿ ತುಟಿ ಬಿಚ್ಚಿಲ್ಲ ಯಾಕೆ? ಇದು ಬಿಜೆಪಿ ಹಾಗೂ ಭಯೋತ್ಪಾದಕರ ನಡುವೆ ಸಂಬಂಧವಿದೆ ಎಂಬುದನ್ನು ಸ್ಪಷ್ಟಡಿಸುತ್ತದೆ’ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಉತ್ತಮ್ ಕುಮಾರ್ ರೆಡ್ಡಿ ಮಾಧ್ಯಮಗೋಷ್ಠಿ ನಡೆಸಿ ದಾಖಲೆಗಳನ್ನು ಮುಂದಿಟ್ಟು ಬಿಜೆಪಿ ಹಾಗೂ ಭಯೋತ್ಪಾದಕರ ನಡುವಣ ಸಂಬಂಧವಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತಮ್ ಕುಮಾರ್ ಹೇಳಿದ್ದಿಷ್ಟು;
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಯೋತ್ಪಾನೆಯಂತಹ ರಾಷ್ಟ್ರ ಮಟ್ಟದ ಗಂಭೀರ ವಿಚಾರದಲ್ಲಿ ರಾಜಕೀಯ ಮಾಡಲು ಇಚ್ಛಿಸುವುದಿಲ್ಲ. ಆದರೆ ಬಿಜೆಪಿ ಹಾಗೂ ಭಯೋತ್ಪಾದಕರ ನಡುವೆ ನಿಕಟವಾದ ಸಂಪರ್ಕವಿದೆ ಎಂಬುದಕ್ಕೆ ಹಲವು ಘಟನೆಗಳು ಸಾಕ್ಷಿಯಾಗಿವೆ. ಹೀಗಾಗಿ ರಾಷ್ಟ್ರೀಯತೆ ಬಗ್ಗೆ ಪ್ರವಚನ ಮಾಡುವ ಬಿಜೆಪಿಗೆ ಕೆಲವು ನೇರ ಪ್ರಶ್ನೆಗಳನ್ನು ಕೇಳಬಯಸುತ್ತೇವೆ.
ಇತ್ತೀಚೆಗೆ ಉದಯಪುರದಲ್ಲಿ ಕನ್ನಯ್ಯ ಲಾಲ್ ಅವರ ಹೃದಯವಿದ್ರಾವಕ ಹತ್ಯೆಯ ಪ್ರಮುಖ ಆರೋಪಿ ಮುಹಮ್ಮದ್ ರಿಯಾಝ್ ಅತ್ತಾರಿ ಬಿಜೆಪಿಯ ಕಾರ್ಯಕರ್ತ ಎಂಬುದು ತಿಳಿದುಬಂದಿದೆ. ಆತ ಸ್ಥಳೀಯ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ. ಮಾಧ್ಯಮಗಳ ವರದಿ ಪ್ರಕಾರ ಅತ್ತಾರಿ ರಾಜಸ್ಥಾನದ ವಿರೋಧ ಪಕ್ಷದ ನಾಯಕ ಬಿಜೆಪಿಯ ಗುಲಾಬ್ ಚಾಂದ್ ಕಟಾರಿಯಾ ಅವರ ಅಳಿಯನ ಬಳಿ ಕೆಲಸ ಮಾಡುತ್ತಿದ್ದು, ಬಿಜೆಪಿ ನಾಯಕರ ಅನೇಕ ಕಾರ್ಯಕ್ರಮಗಳಲ್ಲಿ ಈತನೂ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ಇನ್ನು ಜಮ್ಮು ಕಾಶ್ಮೀರದಲ್ಲಿ ಸ್ಥಳೀಯರಿಂದ ಸೆರೆ ಹಿಡಿಯಲ್ಪಟ್ಟ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರ ತಲಿಬ್ ಹುಸೇನ್ ಶಾ ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ. ಈತ ಬಿಜೆಪಿ ಪದಾಧಿಕಾರಿಯಾಗಿದ್ದು, ಜಮ್ಮು ಕಾಶ್ಮೀರದ ಅಲ್ಪಸಂಖ್ಯಾತ ವಿಭಾಗದ ಸಾಮಾಜಿಕ ಜಾಲತಾಣ ಉಸ್ತುವಾರಿಯಾಗಿದ್ದ. ಈತ ಅಮಿತಾ ಶಾ ಹಾಗೂ ಇತರ ಹಿರಿಯ ನಾಯಕರ ಜತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾನೆ.
ಅಮರಾವತಿಯ ರಸಾಯನಶಾಸ್ತ್ರಜ್ಞ ಉಮೇಶ್ ಖೊಲ್ಲೆ ಅವರ ಹತ್ಯೆ ಪ್ರಕರಣದ ರೂವಾರಿ ಇರ್ಫಾನ್ ಖಾನ್ ಪಕ್ಷೇತರ ಸಂಸದೆ ನವನೀತ್ ರಾಣಾ ಹಾಗೂ ಆಕೆಯ ಪತಿ ರವಿ ರಾಣಾ ಅವರಿಗೆ ಆತ್ಯಾಪ್ತನಾಗಿದ್ದಾನೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಜತೆಗೆ ಇರ್ಫಾನ್ ರಾಣಾ ಅವರ ಪರವಾಗಿ ಮತಯಾಚನೆ ಮಾಡಿ ಪ್ರಚಾರವನ್ನು ಮಾಡಿದ್ದಾನೆ. ರಾಣಾ ದಂಪತಿಗೂ ಬಿಜೆಪಿಗೂ ನಿಕಟ ಸಂಬಂಧವಿದೆ.
ಬಿಜೆಪಿ ಮಾಜಿ ನಾಯಕ ಹಾಗೂ ಮಾಜಿ ಸರಪಂಚ್ ತಾರಿಖ್ ಅಹ್ಮದ್ ಮೀರ್ 2020ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು ಅವರಿಗೆ ಶಸ್ತ್ರಾಸ್ತರ ಪೂರೈಕೆ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಇದಕ್ಕೂ ಮುನ್ನ ನವೀದ್ ಬಾಬು ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣದಲ್ಲಿ ಡಿಎಸ್ ಪಿ ದವಿಂದರ್ ಸಿಂಗ್ ಜತೆಗೆ ಬಂಧನವಾಗಿದ್ದ. ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು ಮೀರ್ ಹಾಗೂ ದವೀಂದರ್ ಸಿಂಗ್ ನಡುವೆ ಸಂಪರ್ಕವಿತ್ತು ಎಂಬುದನ್ನು ಧೃಡಪಡಿಸಿದೆ. ದವೀಂದರ್ ಸಿಂಗ್ ಅವರನ್ನು ಸರಿಯಾಗಿ ವಿಚಾರಣೆ ನಡೆಸಿದ್ದರೆ ಸತ್ಯಾಂಶ ಹೊರಬರುತ್ತಿತ್ತು. ಆದರೆ ಈ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
2017ರಲ್ಲಿ ಮಧ್ಯಪ್ರದೇಶದ ಭಯೋತ್ಪದನಾ ನಿಗ್ರಹ ದಳ ಬಿಜೆಪಿ ಐಟಿ ಸೆಲ್ ಸದಸ್ಯ ಧೃವ್ ಸಕ್ಸೇನಾ ಹಾಗೂ ಆತನ 10 ಸಹಚರರನ್ನು ಐಎಸ್ಐ ಪರವಾಗಿ ಗೂಢಾಚಾರಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿಸಿತ್ತು. ಈ ತಂಡ ಕಾನೂನು ಬಾಹೀರವಾಗಿ ದೂರವಾಣಿ ಸಂಪರ್ಕ ಜಾಲವನ್ನು ಹೊಂದಿದ್ದು, ಆಮೂಲಕ ಬೇಹುಗಾರಿಕೆ ನಡೆಸುತ್ತಿತ್ತು. ಈ ಸಕ್ಸೆನಾ ಹಾಗೂ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಫೋಟೋ ಕೂಡ ವೈರಲ್ ಆಗಿತ್ತು.
ಎರಡು ವರ್ಷಗಳ ನಂತರ ಮಧ್ಯಪ್ರದೇಶ ಬಜರಂಗದಳದ ನಾಯಕ ಬಲರಾಮ್ ಸಿಂಗ್ ನನ್ನು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಇನ್ನು ಅಸ್ಸಾಂ ಬಿಜೆಪಿ ನಾಯಕ ನಿರಂಜನ್ ಹೊಜೈ ಸರ್ಕಾರದ ಹಣವನ್ನು ಭಯೋತ್ಪಾದಕ ಸಂಘಟನೆಗಳಿಗೆ ಕಳುಹಿಸುತ್ತಿದ್ದ ಹಾಗೂ ಈ ರೀತಿ 1 ಸಾವಿರ ಕೋಟಿ ಹಗರಣ ನಡೆಸಿದ ಆರೋಪದ ಮೇಲೆ 2017ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ಹಣದಲ್ಲಿ ಭಯೋತ್ಪಾದಕ ಸಂಘಟನೆಗಳು ಶಸ್ತ್ರಾಸ್ತ್ರ ಖರೀದಿ ಮಾಡಿ ರಾಷ್ಟ್ರದ ಮೇಲೆ ದಾಳಿ ಮಾಡುತ್ತಿದ್ದವು.
ಬಿಜೆಪಿಯು ಶ್ರೀನಗರದ ಪಾಲಿಕೆ 33ನೇ ವಾರ್ಡ್ ಚುನಾವಣೆಯಲ್ಲಿ ಮುಹಮ್ಮದ್ ಫಾರೂಖ್ ಖಾನ್ ಗೆ ಪಕ್ಷದ ಟಿಕೆಟ್ ನೀಡಿದ್ದು, ಈತ ಜಾಗತಿಕ ಉಗ್ರ ಮಸೂದ್ ಅಝರ್ ನ ಸಹಚರನಾಗಿದ್ದ. ಅಲ್ಲದೆ ಈತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಹಾಗೂ ಹರ್ಕತ್ ಉಲ್ ಮುಜಾಹಿದ್ದೀನ್ ಸಂಘಟನೆಗಳ ಸದಸ್ಯನೂ ಆಗಿದ್ದ. ಈ ವಿಚಾರ ತಿಳಿದೂ ಕೂಡ ಬಿಜೆಪಿ ಟಿಕೆಟ್ ಈತನಿಗೆ ನೀಡಿತ್ತು.
1999ರ ಕಂದಾಹಾರ್ ಹೈಜಾಕ್ ಪ್ರಕರಣದ ವೇಳೆ ಉಗ್ರ ಮಸೂದ್ ಅಝರ್ ಬಿಡುಗಡೆ ವಿಚಾರದಲ್ಲೂ ಬಿಜೆಪಿ ಸರ್ಕಾರದ ಮೇಲೆ ಅನುಮಾನಗಳು ವ್ಯಕ್ತವಾಗಿತ್ತು. ನಂತರ ಅಝರ್ ಜೈಶ್ ಎ ಮುಹಮ್ಮದ್ ಸಂಘಟನೆಯನ್ನು ಸ್ಥಾಪಿಸಿ 2001ರಲ್ಲಿ ಸಂಸತ್ ಮೇಲಿನ ದಾಳಿ ಹಾಗೂ 2008ರಲ್ಲಿ ಮುಂಬೈ ಮೇಲೆ ದಾಳಿ ಮಾಡಿ ನೂರಾರು ಜನರನ್ನು ಹತ್ಯೆ ಮಾಡಿಸಿದ.
ಮಸೂದ್ ಅಝರ್ 2019ರ ಪುಲ್ವಾಮ ದಾಳಿಯ ರೂವಾರಿಯೂ ಆಗಿದ್ದು, ಇದರಲ್ಲಿ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇನ್ನು ಗಡಿಯಲ್ಲಿ ಹಲವು ಚೆಕ್ ಪಾಯಿಂಟ್ ಗಳಲ್ಲಿ ಭದ್ರತೆಯ ಕಣ್ಣು ತಪ್ಪಿಸಿ 200 ಕೆ.ಜಿ.ಯಷ್ಟು ಆರ್ ಡಿಎಕ್ಸ್ ಹಾಗೂ ಇತರ ಸ್ಫೋಟಕಗಳು ಹೇಗೆ ರವಾನೆಯಾಗಿತ್ತು? ಈ ಕುರಿತ ತನಿಖೆ ಏಕೆ ನಡೆಯಲಿಲ್ಲ ಎಂಬ ಪ್ರಶ್ನೆ ಹಾಗೇ ಉಳಿದಿವೆ.
ರಾಷ್ಟ್ರೀಯತೆ ಬಗ್ಗೆ ಪದೇ ಪದೆ ಮಾತನಾಡುವ ಪಕ್ಷ, ಭಯೋತ್ಪಾದನೆ ನಿಚಾರದಲ್ಲಿ ಸದಾ ಸುಳ್ಳಿನ ಮೂಲಕ ವಿರೋಧ ಪಕ್ಷಗಳ ವಿರುದ್ಧ ಪ್ರಚಾರ ಮಾಡುವ ಬಿಜೆಪಿ ವಿರುದ್ಧ ಈಗ ಸಾಕಷ್ಟು ಸಾಕ್ಷ್ಯಗಳು ಇವೆ. ಉದಯಪುರ ಹತ್ಯೆ ಪ್ರಕರಣದಿಂದ ಜಮ್ಮು ಕಾಶ್ಮೀರದ ಹುಸೇನ್ ಅವರ ಪ್ರಕರಣದವರೆಗೂ ಪ್ರಧಾನಿ ಮೋದಿ ಅವರಾಗಲಿ, ಗೃಹ ಸಚಿವ ಅಮಿತ್ ಶಾ ಅವರಾಗಲಿ ಯಾವುದೇ ರೀತಿಯ ಹೇಳಿಕೆಯನ್ನು ನೀಡದಿರುವುದು ಆಘಾತ ತಂದಿದೆ. ಇಂತಹ ಕೋಮು ಸಂಘರ್ಷ ನಡೆಯಬಾರದು. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಭರವಸೆ ನೀಡಲು ಸರ್ಕಾರ ವಿಫಲವಾಗಿದೆ.
ಇಷ್ಟು ದಿನಗಳ ಕಾಲ ಚುನಾವಣೆಯಲ್ಲಿ ಮತಗಳಿಸಲು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯುತ್ತಿದ್ದ ಬಿಜೆಪಿ ಈಗ ಒಂದು ಹೆಜ್ಜೆ ಮುಂದೆ ಹೋಗಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕೋಮು ಗಲಭೆ ಮಾಡಿಸಲು ಮುಂದಾಗಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಒಂದೆಡೆ ಬಿಜೆಪಿ ವಕ್ತಾರೆ ನುಪುರ್ ಶರ್ಮಾ ಒಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಬೆಂಕಿ ಹಚ್ಚಿದರೆ, ಮತ್ತೊಂದು ಕಡೆ ಬಿಜೆಪಿ ಕಾರ್ಯಕರ್ತ ಮುಹಮ್ಮದ್ ರಿಯಾಝ್ ಅತ್ತಾರಿ ಕೊಲೆಯು ಕೊಲೆ ಮಾಡಿ ಮತ್ತೊಂದು ಧರ್ಮವನ್ನು ಕೆಣಕುವ ಕೆಲಸ ಮಾಡುತ್ತಿದೆ. ಬಿಜೆಪಿಯ ಈ ಪ್ರಯತ್ನ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ’
ಮಾಧ್ಯಮ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ, ಸಹ ಅಧ್ಯಕ್ಷ ಮನ್ಸೂರ್ ಅಲಿ ಖಾನ್, ಕೆಪಿಸಿಸಿ ಮುಖ್ಯ ವಕ್ತಾರ ನಾಗರಾಜ್ ಯಾದವ್, ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.







