ಬ್ರಹ್ಮಾವರ: ವಿಶಾಲ ಗಾಣಿಗ ಕೊಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಮತ್ತೋರ್ವ ಸುಪಾರಿ ಕಿಲ್ಲರ್ ಬಂಧನ

ವಿಶಾಲ ಗಾಣಿಗ
ಉಡುಪಿ: ಒಂದು ವರ್ಷದ ಹಿಂದೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಫ್ಲ್ಯಾಟ್ನಲ್ಲಿ ನಡೆದ ವಿಶಾಲ ಗಾಣಿಗ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿ, ಸುಪಾರಿ ಕಿಲ್ಲರ್ನನ್ನು ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಗೋರಖಪುರದಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಗೋರಖಪುರ ನಿವಾಸಿ ರೋಹಿತ್ ರಾಣಾ ಪ್ರತಾಪ್ (21) ಬಂಧಿತ ಆರೋಪಿ.
ಕಳೆದ ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಗೋರಖ ಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತ ಆರೋಪಿಯನ್ನು ಪೊಲೀಸರು ಇಂದು ಕುಂದಾಪುರಕ್ಕೆ ಕರೆದು ಕೊಂಡು ಬಂದಿದ್ದು, ಬೆಳಗ್ಗೆ ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಹೆಚ್ಚಿನ ತನಿಖೆ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಅದರಂತೆ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ಹಾಗೂ ತನಿಖೆಗೆ ಒಳಪಡಿಸಿದ್ದಾರೆ.
2021ರ ಜು.12ರಂದು ವಿಶಾಲ ಗಾಣಿಗ ಅವರನ್ನು ಅವರ ಪ್ಲಾಟಿನಲ್ಲಿ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದ ರೂವಾರಿ, ಆಕೆಯ ಪತಿ ರಾಮಕೃಷ್ಣ ಗಾಣಿಗ(42) ಹಾಗೂ ಈತನಿಂದ ಹತ್ಯೆಗೆ ಸುಪಾರಿ ಪಡೆದ ಗೋರಖಪುರದ ಸ್ವಾಮಿನಾಥ ನಿಶಾದ(38) ಎಂಬಾತನನ್ನು ಬಂಧಿಸಿದ್ದರು.