ಪ್ರೊ.ಮಲ್ಲೇಪುರಂ ವೆಂಕಟೇಶ್‌ಗೆ ಸೇಡಿಯಾಪು ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ವಿಶ್ರಾಂತ ಕುಲಪತಿ, ಕನ್ನಡ ಹಾಗೂ ಸಂಸ್ಕೃತದ ಹಿರಿಯ ಸಾಹಿತಿ ಪ್ರೊ.ಮಲ್ಲೇ ಪುರಂ ಜಿ.ವೆಂಕಟೇಶ್ ಅವರಿಗೆ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿಯನ್ನು ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ವೆಂಕಟೇಶ್, ಸಂಶೋಧನೆಯಲ್ಲಿ ಹೊಸ ದಾರಿ ನಿರ್ಮಿಸಲು ಸಾಕಷ್ಟು ಅವಕಾಶಗಳಿವೆ. ಆ ನಿಟ್ಟಿನಲ್ಲಿ ತರುಣ ಪೀಳಿಗೆ ಸಂಶೋಧನೆಯಲ್ಲಿ ಹೊಸ ದಾರಿ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡ ಬೇಕು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ್ ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ಜಿ. ಶ್ರೀಧರ್ ಪುತ್ತೂರು ಕನ್ನಡ ಕಾವ್ಯದಲ್ಲಿ ಯುದ್ಧ ವರ್ಣನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ತುಳುಭಾಷಾ ತಜ್ಞ ಡಾ.ಪದ್ಮನಾಭ ಕೇಕುಣ್ಣಾಯ ಅಭಿನಂದನಾ ಭಾಷಣ ಮಾಡಿದರು. ಪ್ರಶಸ್ತಿ ಸಮಿತಿ ಸದಸ್ಯ, ಪ್ರಾಧ್ಯಾಪಕ ಡಾ.ಸೆಡಿಯಾಪು ಜಯರಾಮ ಭಟ್ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ನವ್ಯಾಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







