ಹೆದ್ದಾರಿ ಅಗಲೀಕರಣ | ಮರಗಳ ಸ್ಥಳಾಂತರಕ್ಕೆ ಲೋಕೋಪಯೋಗಿ ಇಲಾಖೆ ಕ್ರಮ: ಸಚಿವ ಸಿ.ಸಿ.ಪಾಟೀಲ್

ಬೆಂಗಳೂರು, ಜು. 9: ‘ಮರಗಳನ್ನು ರಕ್ಷಿಸಿ, ಹಸಿರನ್ನು ಉಳಿಸಿ. ಹೆದ್ದಾರಿ ಅಗಲೀಕರಣಗೊಳಿಸುವಾಗ ಮರಗಳನ್ನು ಕಡಿದು ಪರಿಸರನಾಶ ಮಾಡುವುದರ ಬದಲಾಗಿ, ಅಂತಹ ಮರಗಳನ್ನು ಸ್ಥಳಾಂತರಗೊಳಿಸಿ, ಬೇರೆಡೆ ನೆಟ್ಟು ಸಂರಕ್ಷಿಸುವ ಅಪರೂಪದ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ಅವರು, ‘ಬೆಂಗಳೂರು ಸುತ್ತಮುತ್ತ ಆರು ರಸ್ತೆ, ಹೆದ್ದಾರಿ ಅಗಲೀಕರಣದಲ್ಲಿ 1,500ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಿ ಮರುನೆಟ್ಟು ಪರಿಸರ ಸಂರಕ್ಷಿಸಲು ಮಾದರಿ ಪ್ರಯತ್ನ ನಡೆಸಲಾಗಿದೆ. ಮುಂದೆಯೂ ಇನ್ನಷ್ಟು ಮರಗಳನ್ನು ಇದೇ ರೀತಿ ಉಳಿಸಿ-ಬೆಳೆಸಲು ಕಾಳಜಿ ವಹಿಸಲಾಗುವುದು' ಎಂದು ಹೇಳಿದ್ದಾರೆ.
ಮರಗಳ ಸ್ಥಳಾಂತರ: ‘ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೂದಿಗೆರೆ ಕ್ರಾಸ್, ಗೊಲ್ಲಹಳ್ಳಿ ಮೂಲಕ ನೆಲಮಂಗಲದಿಂದ ಮಧುರೈಗೆ ತೆರಳುವ ಹೆದ್ದಾರಿ, ರಾಜಾನುಕುಂಟೆ ಮೂಲಕ ದೇವನಹಳ್ಳಿಯಿಂದ ಮಧುರೈಗೆ ತೆರಳುವ ಹೆದ್ದಾರಿ, ಹಾರೋಹಳ್ಳಿ ಮೂಲಕ ಬಿಡದಿಯಿಂದ ಜಿಗಣಿಗೆ ತೆರಳುವ ಹೆದ್ದಾರಿ, ಜಿಗಣಿ ಮೂಲಕ ಬನ್ನೇರುಘಟ್ಟದಿಂದ ಆನೇಕಲ್‍ಗೆ ತೆರಳುವ ಹೆದ್ದಾರಿ ಸೇರಿದಂತೆ ಒಟ್ಟು 155 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಯೋಜನೆಯಲ್ಲಿ ಮರಗಳ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
‘ಲೋಕೋಪಯೋಗಿ ಇಲಾಖೆಯಿಂದ ಶಾಲೆ-ಕಾಲೇಜು, ನ್ಯಾಯಾಲಯಗಳೂ ಸೇರಿದಂತೆ ಯಾವುದೇ ಕಟ್ಟಡ ನಿರ್ಮಿಸುವಾಗಲೂ ಸುತ್ತಮುತ್ತ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಗಿಡ-ಮರಗಳನ್ನು ಬೆಳೆಸುವುದಕ್ಕೆ ಅವಕಾಶವಿಟ್ಟು ಅವುಗಳನ್ನು ಪೋಷಿಸಬೇಕೆಂದು ಈಗಾಗಲೇ ಇಲಾಖೆ ಸುತ್ತೋಲೆ ಹೊರಡಿಸಿ ಆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರ ನೀಡಿದ್ದಾರೆ.
‘ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ವೇಳೆ ಅವುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ವೈಜ್ಞಾನಿಕವಾಗಿ ಅವುಗಳ ಬೇರುಗಳನ್ನು ಸಂರಕ್ಷಿಸುವುದಲ್ಲದೆ, ಬ್ಯಾಕ್ಟೀರಿಯಾ ಅಥವಾ ಇನ್ನಿತರ ಅಪಾಯಕಾರಿ ಸೋಂಕುಗಳಿಗೆ ಈಡಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಣ್ಣು ಪರೀಕ್ಷೆಯ ವರದಿ ಪಡೆದು ಆಯಾ ಜಾತಿಯ ಗಿಡಮರಗಳಿಗೆ ಸ್ಥಳೀಯ ಪರಿಸರ ಹೊಂದಿಕೆ ಆಗುವಂತೆ ಈ ಯೋಜನೆ ಜಾರಿಗೊಳಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.







