ಸರ್ವಧರ್ಮ ಗುರುಗಳಿಂದ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಮಣಿಪಾಲ : ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದಲ್ಲಿ ಹಮ್ಮಿಕೊಳ್ಳ ಲಾದ ಮೂರು ದಿನಗಳ ಸ್ಪಿರಿಟ್ ಆಫ್ ಸ್ಪಿರಿಚ್ವಾಲಿಟಿ ಚಿತ್ರಕಲಾ ಪ್ರದರ್ಶನವನ್ನು ಶನಿವಾರ ವಿವಿಧ ಧರ್ಮಗಳ ಧರ್ಮಗುರುಗಳು ದೀಪ ಹಚ್ಚುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು.
ಮೂಡಬಿದ್ರೆ ಜೈನ ಮಠದ ಡಾ.ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ, ಉಡುಪಿ ಅನಂತೇಶ್ವರ ದೇವಸ್ಥಾನ ಅರ್ಚಕ ಸಗ್ರಿ ವೇದವ್ಯಾಸ ಐತಾಳ್, ಮಲ್ಪೆ ಜಾಮೀಯ ಮಸೀದಿಯ ಧರ್ಮ ಗುರು ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ, ಪೆರಂಪಳ್ಳಿ ಅವರ್ ಲೇಡಿ ಆಫ್ ಫಾತೀಮಾ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಅನಿಲ್ ಡಿಸೋಜ, ಮಣಿಪಾಲ ಗುರುದ್ವಾರ ಸಾಹಿಬ್ ಆರಾಧಕ ಗಿಯಾನಿ ಬಲರಾಜ್ ಸಿಂಘ್ ಜೀ ಪ್ರದರ್ಶನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆಧ್ಯಾತ್ಮವು ಕ್ರೌರ್ಯವನ್ನು ಉತ್ತೇಜಿಸದೇ ಆಶಾಭಾವನೆಯನ್ನು ಬಿತ್ತುವ, ಬದುಕು ಹಾಗೂ ಭವಿಷ್ಯವನ್ನು ಹೇಗೆ ನಿರ್ಮಾಣ ಮಾಡಬೇಕೆನ್ನುವುದನ್ನು ತೋರಿ ಸುತ್ತದೆ. ಆಧ್ಯಾತ್ಮ ಎನ್ನುವುದು ಸರ್ವ ಧರ್ಮ ಹಾಗೂ ಸರ್ವ ಜೀವ ಪರವಾಗಿದೆ. ಆಧ್ಯಾತ್ಮ ಮೃಗೀಯ ಭಾವನೆಗಳನ್ನು ತೊರೆದು ಮನಸ್ಸುಗಳನ್ನು ಅರಳಿಸುವ ಮೂಲಕ ಮನುಷ್ಯ ಹಾಗೂ ದೈವಿ ಗುಣಗಳನ್ನು ಕಲಿಸುವ ಕೆಲಸವಾಗುತ್ತದೆ ಎಂದು ಡಾ.ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.
ತ್ರಿವರ್ಣ ಕಲಾ ಮಾರ್ಗದರ್ಶಕ ಹರೀಶ್ ಸಾಗಾ ಉಪಸ್ಥಿತರಿದ್ದರು. ನಿರ್ಮಲಾ ಶೆಟ್ಟಿ ಸ್ವಾಗತಿಸಿದರು. ವಿಧುಶಂಕರ್ ವಂದಿಸಿದರು. ಚೇತನಾ ಕಾರ್ಯ ಕ್ರಮ ನಿರೂಪಿಸಿದರು.
ಅಕ್ರಾಲಿಕ್ ಕ್ಯಾನ್ವಾಸ್ ೧೩ ಕಲಾಕೃತಿಗಳು ಮತ್ತು ಗ್ಲಾಸ್ ಮಾರ್ಕಿಂಗ್ ಪೆನ್ಸಿಲ್ ನಿಂದ ರಚಿತ ೮ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿದೆ. ಅರ್ಘ್ಯ, ಮೌನಂ, ಇನ್ವೋಕೇಶನ್, ಅನುಗ್ರಹ, ಸೋಲ್ ರೆಸೋನೆನ್ಸ್, ಸಪ್ಲಿಕೇಶನ್, ಕಾರ್ಣಿಕ, ವೋವ್, ದಿ ಫೈಥ್, ಯೋಗ, ಎ ನಿವ್ ಡೌನ್, ಗಾಯನ, ಔಟ್ ಆಫ್ ಫ್ರೇಮ್, ಮಂತ್ರ, ಹೋಮ, ಅಭಿಷೇಕ, ದಿ ಡಿವೈನ್ ಲೈಟ್, ಗ್ರಾಟಿಟ್ಯೂಡ್, ಪ್ರಕೃತಿ ಪೂಜಾ, ದೃಷ್ಟಿ, ಕಾಂಷನ್‌ಟ್ರೇಶನ್ ಎಂಬ ಕಲಾಕೃತಿಗಳಿವೆ.







