ಭಾರೀ ಮಳೆ; ಉಳ್ಳಾಲ ತಾಲೂಕಿನಲ್ಲಿ ಹಲವೆಡೆ ಹಾನಿ

ಉಳ್ಳಾಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಳ್ಳಾಲದಲ್ಲಿ ಕೆಲವು ಕಡೆ ಹಾನಿಯಾದ ಬಗ್ಗೆ ವರದಿಯಾಗಿದೆ. ಈವರೆಗೆ 62 ಮನೆಗಳು ಭಾಗಶಃ ಹಾನಿಯಾಗಿದೆ. ಈ ಪೈಕಿ 49 ಮನೆಗಳಿಗೆ ಪರಿಹಾರ ನೀಡಲಾಗಿದೆ. 4 ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಈ ಪೈಕಿ 3 ಮನೆಗಳಿಗೆ ಪರಿಹಾರ ನೀಡಲಾಗಿದೆ. ಒಂದು ಮನೆ ಸಂಪೂರ್ಣ ಹಾನಿಯಾಗಿದ್ದು ಪರಿಹಾರ ಒದಗಿಸಲಾಗಿದೆ.
ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿ ಜಾಸ್ತಿ ಆಗಿರುವುದರಿಂದ ಈಗಾಗಲೇ ಅಂಬ್ಲಮೊಗರು ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ಇನೋಳಿ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ಮುನ್ನೂರು ಗ್ರಾಮ ಪಂಚಾಯತ್ ಸಭಾಭವನ, ಗಾಡಿಗದ್ದೆ ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ, ರಾಣಿಪುರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಕೃತಿಕ ವಿಕೋಪ ನಿರ್ಮಾಣ ಕೇಂದ್ರ ಒಂಬತ್ತು ಕೆರೆ ಯಲ್ಲಿ ಕಾಳಜಿ ಕೇಂದ್ರ ವನ್ನು ಈಗಾಗಲೇ ತೆರೆಯಲಾಗಿದೆ.
ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಕೆರೆಬೈಲ್ ನಲ್ಲಿ ತಡೆಗೋಡೆ ಕುಸಿದು ಮೂರು ಮನೆಗಳಿಗೆ ಹಾನಿಯಾಗಿದ್ದು, ಪ್ರಕಾಶ್, ಐರಿನ್ ಡಿಸೋಜ ಡೆಲ್ಫಿನ್ ಡಿಸೋಜ ಅವರ ಮನೆ ಹಾನಿಯಾದ ಹಿನ್ನೆಲೆಯಲ್ಲಿ ಈ ಮೂರು ಕುಟುಂಬ ಸಂಬಂಧಿಕರ ಮನೆಗೆ ಸ್ಥಳಾಂತರ ಗೊಂಡಿದೆ.
ಸುಭಾಷ್ ನಗರ ಎಂಬಲ್ಲಿ ವೇದಾವತಿ ರವರ ವಾಸ್ತವ್ಯದ ಮನೆಯು ಭಾಗಶಃ ಹಾನಿಯಾಗಿದೆ.ಪಾವೂರು ಗ್ರಾಮದ ಪೂಡಾರ್ ಬಳಿ ಅವ್ವಮ್ಮ ರವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಸಜಿಪನಡು ಗ್ರಾಮದ ಯಮುನಾ ಅವರ ಮನೆ ಛಾವಣಿ ಕುಸಿದು ಭಾಗಶಃ ಹಾನಿಯಾಗಿದೆ. ಪಾವೂರು ಗ್ರಾಮದ ಲ್ಲಿ ಕೆಲವು ಕಡೆ ಬಾವಿ ಕುಸಿದು ಬಿದ್ದಿದ್ದು ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ. ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ರಸ್ತೆ ಯಲ್ಲಿ ಮಣ್ಣು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಅದನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿ ಕೊಡಲಾಗಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ತಹಶೀಲ್ದಾರ್ ಗುರುಪ್ರಸಾದ್, ಆಯಾ ಪಂಚಾಯತ್ ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ







.jpeg)


