ಕುಶಾಲನಗರ: ಬೋಟ್ ಚಾಲಕನ ಸಮಯಪ್ರಜ್ಞೆಯಿಂದ ದುಬಾರೆಯಲ್ಲಿ ತಪ್ಪಿದ ಭಾರೀ ಅನಾಹುತ

ಮಡಿಕೇರಿ ಜು.9: ಜನರನ್ನು ಸಾಗಿಸುತ್ತಿದ್ದ ಬೋಟ್ ವೊಂದು ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ತಾಂತ್ರಿಕ ದೋಷದಿಂದ ಸಿಲುಕಿದ ಘಟನೆ ದುಬಾರೆಯಲ್ಲಿ ನಡೆದಿದೆ.
ದುಬಾರೆ ಸಾಕಾನೆ ಶಿಬಿರದ ಬಳಿ ವಾಸವಿರುವ ಹಾಡಿ ಜನ ಮಳೆಗಾಲದಲ್ಲಿ ನದಿ ದಾಟಲು ಬೋಟ್ ಅನ್ನು ಅವಲಂಭಿಸಿದ್ದಾರೆ. ಅದರಂತೆ ಶನಿವಾರ ಹಾಡಿಯ 10ಕ್ಕೂ ಹೆಚ್ಚು ಮಂದಿ ಬೋಟ್ ನಲ್ಲಿ ಹೊರಟಿದ್ದಾರೆ. ಉಕ್ಕಿ ಹರಿಯುತ್ತಿರುವ ಕಾವೇರಿ ನದಿ ಮಧ್ಯ ತೆರಳುತ್ತಿದ್ದಂತೆಯೇ ಬೋಟ್‍ನ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಥಗಿತಗೊಂಡಿದೆ. ಪ್ರವಾಹದ ನೀರಿನಲ್ಲಿ ಬೋಟ್ ತೇಲಿಕೊಂಡು ಹೋಗುತ್ತಿದ್ದ ಸಂದರ್ಭ ಬೋಟ್ ಚಾಲಕ ಸಮಯಪ್ರಜ್ಞೆ ಮೆರೆದು ನದಿ ಮಧ್ಯದಲ್ಲಿದ್ದ ಮರದ ಕೊಂಬೆ ಹಿಡಿದು ಬೋಟ್ ಕೊಚ್ಚಿ ಹೋಗದಂತೆ ತಡೆಯುವಲ್ಲಿ ಸಫಲರಾಗಿದ್ದಾರೆ.
ಬಳಿಕ ಮತ್ತೊಂದು ಬೋಟ್ ಸಹಾಯಕ್ಕೆ ಧಾವಿಸಿ ತಾಂತ್ರಿಕ ದೋಷ ಕಂಡು ಬಂದಿದ್ದ ಬೋಟ್‍ನಲ್ಲಿದ್ದ ಎಲ್ಲಾ ಹಾಡಿ ನಿವಾಸಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತರುವಲ್ಲಿ ಸಫಲರಾಗಿದ್ದಾರೆ.
ಸಂಭಾವ್ಯ ಭಾರೀ ದುರಂತವೊಂದು ತಪ್ಪಿದಂತಾಗಿದ್ದು, ನೋಡುಗರು ನಿಟ್ಟುಸಿರು ಬಿಡುವಂತಾಯಿತು.





