ಕೃತಿಗಳಲ್ಲಿ ಹೊಸತನವನ್ನು ನೀಡುವುದು ಲೇಖಕನ ಜವಾಬ್ದಾರಿ: ಡಾ. ಸಿ.ಎನ್. ರಾಮಚಂದ್ರನ್

ಬೆಂಗಳೂರು, ಜು.9: ಯಾವುದೇ ಒಂದು ಹೊಸ ಕೃತಿ ಲೋಕಾರ್ಪಣೆಗೊಂಡಾಗ, ಓದುಗರು ಅದರಲ್ಲಿ ಹೊಸತನವನ್ನು ಬಯಸುತ್ತಾರೆ. ಇದು ಲೇಖಕನಾದವನ ಜವಾಬ್ದಾರಿಯೂ ಆಗಿದ್ದು, ಇದನ್ನು ಹಂಪನಾ ಅವರು ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ಖ್ಯಾತ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಅಭಿಪ್ರಾಯಪಟ್ಟರು.
ಶನಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಹಂಪ ನಾಗರಾಜಯ್ಯ ಬರೆದ ‘ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕʼ ಎಂಬ 5 ಸಂಪುಟಗಳ ಇಂಗ್ಲಿಷ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವುದರ ಜೊತೆಗೆ ತನ್ನದೇ ಆದ ಇತಿಹಾಸ ಹೊಂದಿದೆ. ಹೀಗಾಗಿ 9ನೇ ಶತಮಾನದಿಂದ ಆರಂಭವಾದ ಕನ್ನಡ ಸಾಹಿತ್ಯ ಇಂದು ಅಗಾಧವಾಗಿ ಬೆಳೆದಿದೆ. ಇದಕ್ಕೆ ಹಿಂದಿನ ಸಾಹಿತ್ಯವನ್ನು ಈ ಸಂಪುಟಗಳು ವಿವರಿಸುತ್ತವೆ. ಈ ನಿಟ್ಟಿನಲ್ಲಿ ಇದು ಕನ್ನಡ ಸಾಹಿತ್ಯ ಲೋಕವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಎಚ್.ಎಸ್. ಶಿವಪ್ರಕಾಶ್ ಮಾತನಾಡಿ, ಹಂಪನಾ ಅವರ ಈ ಸಂಪುಟಗಳು ಕೇವಲ ಚರಿತ್ರೆ, ಪರಿಚಯಾತ್ಮಕ ಕೃತಿಯಾಗಿರದೆ, ಬಹುಮುಖ್ಯ ಸಿದ್ಧಾಂತಗಳನ್ನು ಮಂಡಿಸುವ ಜೊತೆಗೆ ಅನೇಕ ಒಳನೋಟಗಳಿಂದ ಭವಿಷ್ಯದಲ್ಲಿ ಬರುವ ಸಿದ್ಧಾಂತಗಳಿಗೆ ಅನುವು ಮಾಡಿಕೊಡುವ ಅಪರೂಪದ ಗ್ರಂಥವಾಗಿದೆ. ಅಲ್ಲದೆ, ಕನ್ನಡ ಭಾμÉಯ ಸಹಚಾರಿತ್ವಗಳ ಬಗೆಗೆ ಹಂಪನಾ ಸೂಕ್ಷ್ಮ ಅಧ್ಯಯನ ಮಾಡಿದ್ದಾರೆ ಎಂದು ತಿಳಿಯುತ್ತದೆ. ಇದು ದಕ್ಷಿಣ ಭಾರತದ ಮಟ್ಟಿಗೆ ಅಪರೂಪದ ಗ್ರಂಥವಾಗಿದೆ ಎಂದು ಹೇಳಿದರು.
ಸಾಹಿತಿ ರಾಜೇಂದ್ರ ಚೆನ್ನಿ, ಓಎಲ್ ನಾಗಭೂಷಣಸ್ವಾಮಿ, ಎಚ್.ವಿ. ನಾಗರಾಜರಾವ್, ಎಂ.ಜಿ. ಮಂಜುನಾಥ್ ಕೃತಿಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಾಡೋಜ ಹಂಪ ನಾಗರಾಜಯ್ಯ, ಸಪ್ನ ಬುಕ್ ಹೌಸ್‍ನ ದೀಪಕ್ ಶಾ ಉಪಸ್ಥಿತರಿದ್ದರು.
ಒಂದು ಕೃತಿಯ ಮುಖಪುಟ ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ಆಕರ್ಷಣೆ ಅದರ ಒಳಗೂ ಇರಬೇಕು. ಆಗ ಕೃತಿಯು ಜನಮಾನಸದಲ್ಲಿ ಉಳಿಯುತ್ತದೆ. ಇದು ಹಂಪನಾ ಅವರಂಥ ಉತ್ತಮ ಸಾಹಿತಗಳಿಂದ ಮಾತ್ರ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂದು ಬಿಡುಗಡೆಯಾದ ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸೃಷ್ಟಿಸುತ್ತವೆ.
-ಡಾ. ಸಿ. ಎನ್. ರಾಮಚಂದ್ರನ್, ಖ್ಯಾತ ವಿಮರ್ಶಕ







