ಇಳಿದ ನೆರೆ: ನಾವುಂದದಲ್ಲಿ ಜನಜೀವನ ಸಹಜ ಸ್ಥಿತಿಯತ್ತ

ಬೈಂದೂರು : ಭಾರೀ ಮಳೆಯಿಂದಾಗಿ ಕಳೆದ ಐದಾರು ದಿನಗಳಿಂದ ಸಂಪೂರ್ಣ ಜಲಾವೃತಗೊಂಡಿದ್ದ ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲ್ಬುಡ, ಭಾಂಗಿನ್‌ಮನೆ, ಕಂಡಿಕೇರಿ, ಕೆಳಬದಿ ಪರಿಸರದಲ್ಲಿ ನೆರೆ ಇಳಿದಿದ್ದು, ಇಂದು ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ.
ಶುಕ್ರವಾರ ಸಂಜೆಯ ವೇಳೆ ನೆರೆ ಪ್ರಮಾಣ ಇಳಿಕೆ ಕಂಡಿದ್ದು, ಇಂದು ಮಧ್ಯಾಹ್ನ ವೇಳೆ ನೆರೆಯ ನೀರು ಸಂಪೂರ್ಣ ಇಳಿದು ಹೋಗಿದೆ. ಇದೀಗ ರಸ್ತೆಗಳಲ್ಲಿನ ನೀರು ಕೂಡ ಇಳಿದಿದೆ. ಇದರಿಂದ ನಿನ್ನೆಯವರೆಗೆ ದೋಣಿಯನ್ನು ಬಳಕೆ ಮಾಡುತ್ತಿದ್ದ ಜನ, ರಸ್ತೆಯನ್ನೇ ಓಡಾಡುವಂತಾಗಿದೆ. ಈ ಮೂಲಕ ಇಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಕಾಂಗ್ರೆಸ್ ನಿಯೋಗ ಭೇಟಿ: ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಶನಿವಾರ ಭೇಟಿ ನೀಡಿ ಜನರ ಯೋಗಕ್ಷೇಮವನ್ನು ವಿಚಾರಿಸಿತು.
ನಾವುಂದ ಗ್ರಾಪಂ ವ್ಯಾಪ್ತಿಯ ಸಾಲ್ಬುಡ ಗ್ರಾಮದಲ್ಲಿ ನೆರೆಯಿಂದ ಮುಳಗಡೆ ಯಾದ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿದರು. ನೆರೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಂಬಂಧಪಟ್ಟ ಉಸ್ತುವಾರಿ ಸಚಿವರಲ್ಲಿ ಹಾಗೂ ಅಧಿಕಾರಿ ಗಳೊಂದಿಗೆ ಒತ್ತಾಯಿಸಿ ಕೆಲಸ ಮಾಡಿಸುವ ಭರವಸೆ ನೀಡಿದರು.
ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಜಗದೀಶ್ ದೇವಾಡಿಗ, ಬೈಂದೂರು ಯುವಕ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರೋಶನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







