ದ.ಕ.ಜಿಲ್ಲೆ: ಸತತವಾಗಿ ಸುರಿದ ಮಳೆಗೆ ತತ್ತರಿಸಿದ ಜನತೆ
ಜು.12ರವರೆಗೆ ರೆಡ್ ಅಲರ್ಟ್ ಘೋಷಣೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಒಂದು ವಾರದಿಂದ ಸತತವಾಗಿ ಸುರಿದ ಭಾರೀ ಗಾಳಿ ಮಳೆಗೆ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮಳೆ ಹಾನಿ ಪ್ರಕರಣವೂ ಹೆಚ್ಚುತ್ತಿದೆ.
ಕಡಲಿನ ಆರ್ಭಟ ಮತ್ತು ಕಡಲ್ಕೊರೆತವು ತೀವ್ರಗೊಳ್ಳುತ್ತಿವೆ. ಇದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದ ಜನ ಜೀವನ ಅಸ್ತವ್ಯಸ್ಥಗೊಂಡಿದ್ದರೆ. ಕಡಲ ತೀರದ ಪ್ರದೇಶದ ಜನರು ಆತಂಕದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಡಲ್ಕೊರೆತದಿಂದ ತೀರ ಪ್ರದೇಶದ ಮನೆ, ರಸ್ತೆಗಳು, ಮರಗಳನ್ನು ಸಮುದ್ರದ ಭಾರೀ ಗಾತ್ರದ ಅಲೆಗಳು ಆಹುತಿ ಪಡೆಯುತ್ತಿದೆ.
ಶನಿವಾರ ದಿನವಿಡೀ ಎಡೆಬಿಡದೆ ಮಳೆ ಸುರಿದಿದೆ. ಹವಾಮಾನ ಇಲಾಖೆಯು ಜು.12ರವರೆಗೆ ರೆಡ್ ಅಲರ್ಟ್ ಮತ್ತು ಜು.14ರವರೆಗೆ ಆರೇಂಜ್ ಅಲರ್ಟ್ ಘೋಷಿಸಿದೆ.
ಉಳ್ಳಾಲದ ಬಟಪಾಡಿ, ಪಣಂಬೂರು, ಬೈಕಂಪಾಡಿಯಲ್ಲಿ ಶನಿವಾರ ಕಡಲ್ಕೊರೆತ ತೀವ್ರಗೊಂಡಿತ್ತು. ಬೈಕಂಪಾಡಿ ಮೀನಕಳಿಯದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾಗಿದ್ದ ಸಗಟು ಮೀನು ಮಾರುಕಟ್ಟೆಯನ್ನು ಸಮುದ್ರ ಆಹುತಿ ಪಡೆದಿದೆ. ಇಲ್ಲಿನ ಕಾಂಕ್ರೀಟ್ ರಸ್ತೆಯು ಅಪಾಯದಲ್ಲಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಉಳ್ಳಾಲದ ಬಟಪಾಡಿಯಲ್ಲೂ ಕಡಲು ಪ್ರಕ್ಷುಬ್ಧಗೊಂಡಿವೆ. ಅಪಾಯದಲ್ಲಿದ್ದ ಅನೇಕ ಮನೆಮಂದಿ ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ನಗರದ ಬಜ್ಜೋಡಿ ಎಂಬಲ್ಲಿ ಧರೆ ಕುಸಿದು ಅಲ್ಲಿನ ಎರಡು ಮನೆಗಳಿಗೆ ಮಣ್ಣು- ನೀರು ನುಗ್ಗಿದ ಪರಿಣಾಮ ಹಾನಿಯಾಗಿವೆ. ಮಾಲೇಮಾರು ಪ್ರದೇಶದಲ್ಲಿ ಕೂಡ ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಶನಿವಾರ ಅಪರಾಹ್ನದ ವೇಳೆಗೆ ನೀರು ಇಳಿದಿದೆ. ಕಣ್ಣೂರು ಬಳ್ಳೂರುಗುಡ್ಡೆ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ.
ಕೂಳೂರಿನ ಹಳೆ ಸೇತುವೆ ಹಾಗೂ ತೊಕ್ಕೊಟ್ಟು-ದೇರಳಕಟ್ಟೆ ನಡುವಿನ ಪ್ರಮುಖ ರಸ್ತೆಯಲ್ಲಿ ಭಾರೀ ಮಳೆಗೆ ಹೊಂಡಗಳು ಸೃಷ್ಟಿಯಾಗಿವೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.
ಅಪಾರ ಹಾನಿ
ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಶನಿವಾರವೂ ಅಪಾರ ಹಾನಿಯಾಗಿದೆ. ಜಿಲ್ಲೆಯಲ್ಲಿ ಶನಿವಾರ ಒಂದು ಮನೆ ಸಂಪೂರ್ಣ ನೆಲಸಮವಾಗಿದೆ. ಅಲ್ಲದೆ 9 ಮನೆಗಳಿಗೆ ಭಾಗಶಃ ಹಾನಿಯಾ ಗಿವೆ. ಒಟ್ಟಾರೆ ಈವರೆಗೆ ೫೬ ಮನೆಗಳು ಸಂಪೂರ್ಣ ಮತ್ತು ೪೨೭ ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಮಂಗಳೂರು ತಾಲೂಕಿನಲ್ಲಿ ೧೭, ಬಂಟ್ವಾಳದಲ್ಲಿ ೧೦, ಪುತ್ತೂರಿನಲ್ಲಿ ೧, ಬೆಳ್ತಂಗಡಿಯಲ್ಲಿ ೪, ಸುಳ್ಯದಲ್ಲಿ ೨, ಮೂಡುಬಿದಿರೆಯಲ್ಲಿ ೪, ಕಡಬದಲ್ಲಿ ೨, ಮುಲ್ಕಿಯಲ್ಲಿ ೭, ಉಳ್ಳಾಲದಲ್ಲಿ ೯ ಸಹಿತ ೫೬ ಮನೆಗಳು ಸಂಪೂರ್ಣ ನೆಲಸಮವಾಗಿದೆ. ಅಲ್ಲದೆ ಮಂಗಳೂರು ತಾಲೂಕಿನಲ್ಲಿ ೮೬, ಬಂಟ್ವಾಳದಲ್ಲಿ ೨೭, ಪುತ್ತೂರಿನಲ್ಲಿ ೨೧, ಬೆಳ್ತಂಗಡಿಯಲ್ಲಿ ೫೫, ಸುಳ್ಯದಲ್ಲಿ ೫೦ ಮೂಡುಬಿದಿರೆ ೨೯, ಕಡಬದಲ್ಲಿ ೫೮, ಮುಲ್ಕಿಯಲ್ಲಿ ೨೨, ಉಳ್ಳಾಲದಲ್ಲಿ ೯೯ ಸಹಿತ ೪೨೭ ಮನೆಗಳಿಗೆ ಭಾಗಶಃ ಹಾನಿಯಾಗಿವೆ ಎಂದು ದ.ಕ. ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ದ.ಕ.ಜಿಲ್ಲೆಯ ಮಳೆ ವಿವರ
*ಮಂಗಳೂರು: 31.4 ಮಿ.ಮೀ.
*ಬಂಟ್ವಾಳ: 30.1 ಮಿ.ಮೀ.
*ಪುತ್ತೂರು: 36.3 ಮಿ.ಮೀ.
*ಬೆಳ್ತಂಗಡಿ: 38.8 ಮಿ.ಮೀ
*ಸುಳ್ಯ: 42.9 ಮಿ.ಮೀ.
*ಮೂಡುಬಿದಿರೆ: 59.1 ಮಿ.ಮೀ
*ಕಡಬ: 24.9 ಮಿ.ಮೀ







