ರಾಜಕೀಯ ಅವಕಾಶವಾದಕ್ಕಾಗಿ ಜನರನ್ನು ವಿಭಜಿಸಲಾಗುತ್ತಿದೆ: ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್

ಕೋಲ್ಕತಾ,ಜು.9: ರಾಜಕೀಯ ಅವಕಾಶವಾದಕ್ಕಾಗಿ ದೇಶದ ಜನರನ್ನು ವಿಭಜಿಸಲಾಗುತ್ತಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಶನಿವಾರ ಇಲ್ಲಿ ಹೇಳಿದರು.
ಭಾರತಕ್ಕೆ ಸ್ವಾತಂತ್ರ ಲಭಿಸಿ ದಶಕಗಳೇ ಕಳೆದಿದ್ದರೂ ರಾಜಕೀಯ ಕಾರಣಗಳಿಗಾಗಿ ಜನರನ್ನು ಜೈಲಿಗೆ ತಳ್ಳುವ ವಸಾಹತುಶಾಹಿ ಪದ್ಧತಿ ಈಗಲೂ ಮುಂದುವರಿದಿದೆ ಎಂದು ‘ಆನಂದಬಝಾರ್ ಪತ್ರಿಕಾ’ದ ಶತಾಬ್ದಿ ಆಚರಣೆಯಲ್ಲಿ ಮಾಡಿದ ವರ್ಚುವಲ್ ಭಾಷಣದಲ್ಲಿ ಹೇಳಿದ ಸೇನ್,ಭಾರತೀಯರನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯ ಲಾಭಕ್ಕಾಗಿ ಹಿಂದುಗಳು ಮತ್ತು ಮುಸ್ಲಿಮರ ಸಹಬಾಳ್ವೆಯಲ್ಲಿ ಬಿರುಕನ್ನು ಮೂಡಿಸಲಾಗುತ್ತಿದೆ ಎಂದರು.
ಬೆಂಗಾಳಿ ಭಾಷೆಯ ಆನಂದಬಝಾರ್ ಪತ್ರಿಕಾದ ಮೊದಲ ಸಂಚಿಕೆ 1922,ಮಾ.13ರಂದು ಪ್ರಕಟಗೊಂಡಿತ್ತು. ಪ್ರಫುಲ್ ಕುಮಾರ ಸರ್ಕಾರ್ ಅದರ ಸ್ಥಾಪಕ ಸಂಪಾದಕರಾಗಿದ್ದರು.‘ಬ್ರಿಟಿಷರ ಕಾಲದಲ್ಲಿ ದೇಶದ ಹಲವಾರು ಜನರನ್ನು ರಾಜಕೀಯ ಕಾರಣಗಳಿಗಾಗಿ ಜೈಲಿಗೆ ತಳ್ಳಲಾಗುತ್ತಿತ್ತು. ಆಗ ನಾನು ತುಂಬ ಚಿಕ್ಕವನಿದ್ದೆ ಮತ್ತು ಯಾವುದೇ ಅಪರಾಧವನ್ನು ಮಾಡದಿದ್ದರೂ ಜನರನ್ನು ಜೈಲಿಗೆ ತಳ್ಳುವ ಈ ಪದ್ಧತಿ ಎಂದಾದರೂ ನಿಲ್ಲುತ್ತದೆಯೇ ಎಂದು ನಾನು ಆಗಾಗ್ಗೆ ಪ್ರಶ್ನಿಸುತ್ತಿದ್ದೆ. ಬಳಿಕ ಭಾರತವು ಸ್ವತಂತ್ರಗೊಂಡಿತಾದರೂ ಈ ಪದ್ಧತಿ ಈಗಲೂ ಅಸ್ತಿತ್ವದಲ್ಲಿದೆ’ ಎಂದು 88ರ ಹರೆಯದ ಸೇನ್ ಹೇಳಿದರು.ನ್ಯಾಯದ ಮಾರ್ಗವನ್ನು ಅನುಸರಿಸಲು ಪ್ರಯತ್ನಗಳನ್ನು ಮಾಡಲೇಬೇಕಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಕಳೆದ ತಿಂಗಳು ಕೋಲ್ಕತಾದಲ್ಲಿ ಅಮರ್ತ್ಯ ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾರತದಲ್ಲಿಯ ಇಂದಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸೇನ್,‘ಏಕತೆಯನ್ನು ಕಾಯ್ದುಕೊಳ್ಳಲು ಜನರು ಶ್ರಮಿಸಬೇಕಿದೆ. ನನಗೆ ಯಾವುದರ ಬಗ್ಗೆಯಾದರೂ ಭೀತಿಯಿದೆಯೇ ಎಂದು ಯಾರಾದರೂ ನನ್ನನ್ನು ಪ್ರಶ್ನಿಸಿದರೆ ಹೌದು ಎಂದು ಉತ್ತರಿಸುತ್ತೇನೆ. ಹೆದರಿಕೊಳ್ಳಲು ಈಗ ಕಾರಣಗಳಿವೆ. ದೇಶದಲ್ಲಿಯ ಪ್ರಚಲಿತ ಸ್ಥಿತಿಯು ಭೀತಿಗೆ ಕಾರಣವಾಗಿದೆ’ ಎಂದು ಹೇಳಿದ್ದರು.







