ರಾಷ್ಟ್ರೀಯ ಭದ್ರತೆಗೆ ವಿರೋಧ ಆರೋಪ: ಇರಾನ್ ನಲ್ಲಿ ಇಬ್ಬರು ಚಲನಚಿತ್ರ ನಿರ್ದೇಶಕರ ಬಂಧನ

PHOTO: GETTY IMAGES
ಟೆಹ್ರಾನ್, ಜು.9: ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ವರ್ತಿಸಿದ ಆರೋಪದಲ್ಲಿ ಇರಾನ್ ಅಧಿಕಾರಿಗಳು ಸುಧಾರಣಾವಾದಿ ಕಾರ್ಯಕರ್ತ ಮತ್ತು ಇಬ್ಬರು ಚಲನಚಿತ್ರ ನಿರ್ದೇಶಕರನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಮಾಜಿ ಸಚಿವ, ಬಳಿಕ ಸುಧಾರಣಾವಾದಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ಮುಸ್ತಫಾ ತಝದೆಹ್ರನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿ, ಸುಳ್ಳು ಸುದ್ಧಿ ಹರಡುವ ಜತೆಗೆ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದ ಆರೋಪದಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಸರಕಾರದ ಕಟು ಟೀಕಾಕಾರನಾಗಿರುವ ತಝದೆಹ್, ಪರಮಾಣು ಒಪ್ಪಂದದ ವೈಫಲ್ಯಕ್ಕೆ ಪರಮೋಚ್ಛ ಮುಖಂಡ ಅಯತೊಲ್ಲಾ ಅಲಿ ಖಾಮೆನಿಯನ್ನು ಹೊಣೆಯಾಗಿಸಬೇಕು ಎಂದು ಆಗ್ರಹಿಸಿದ್ದರು.ಇದರ ಜತೆಗೆ ಪ್ರತ್ಯೇಕ ಪ್ರಕರಣಗಳಲ್ಲಿ ಸಿನೆಮಾ ನಿರ್ದೇಶಕರಾದ ಮುಹಮ್ಮದ್ ರಸೂಲೊಫ್ ಹಾಗೂ ಅವರ ಸಹಾಯಕ ಮುಸ್ತಫಾ ಅಲಿಅಹ್ಮದ್ರನ್ನು ಬಂಧಿಸಲಾಗಿದ್ದು, ಸರಕಾರಿ ವಿರೋಧಿ ಗುಂಪಿನೊಂದಿಗೆ ಸಂಪರ್ಕ ಹೊಂದಿರುವುದು ಹಾಗೂ ಭದ್ರತೆಗೆ ಧಕ್ಕೆ ತರುವ ಕಾರ್ಯದಲ್ಲಿ ತೊಡಗಿರುವ ಆರೋಪ ಹೊರಿಸಲಾಗಿದೆ.
ಕಳೆದ ಮೇ ತಿಂಗಳಿನಲ್ಲಿ ಇರಾನ್ನಲ್ಲಿ ಕಟ್ಟಡ ಕುಸಿದು ಬಿದ್ದು ಹಲವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿ, ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಟೀಕಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಯಾಗಿದೆ. ಮರಣದಂಡನೆಯ ಬಗ್ಗೆ ಮತ್ತು ಇರಾನ್ ಸರಕಾರದ ಸೆನ್ಸಾರ್ಶಿಪ್ ಅನ್ನು ಧಿಕ್ಕರಿಸಿ ರಹಸ್ಯವಾಗಿ ಚಿತ್ರೀಕರಿಸಿದ್ದ ದ್ಯಾರ್ ಈಸ್ ನೋ ಎವಿಲ್ ಎಂಬ ಸಿನೆಮಕ್ಕೆ ರಸೂಲೊಫ್ 2020ರಲ್ಲಿ ಪ್ರತಿಷ್ಟಿತ ಗೋಲ್ಡನ್ ಬೇರ್ ಪ್ರಶಸ್ತಿ ಪಡೆದಿದ್ದರು.