ಅಧ್ಯಕ್ಷರ ಅರಮನೆಗೆ ನುಗ್ಗಿದ ಪ್ರತಿಭಟನಾಕಾರರು; ರಾಜೀನಾಮೆಗೆ ಒಪ್ಪಿದ ಗೊಟಬಯ ರಾಜಪಕ್ಸೆ

Photo:twitter
ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಶ್ರೀಲಂಕಾದ ಭೀಕರ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದ ಸಾವಿರಾರು ಮಂದಿ ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ಅರಮನೆಗೆ ನುಗ್ಗಿದ ಬೆನ್ನಲ್ಲೇ ದೇಶದ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಲು ರಾಜಪಕ್ಸೆ ಒಪ್ಪಿಕೊಂಡಿದ್ದಾರೆ.
ದೇಶದಲ್ಲಿ ಸರ್ವ ಪಕ್ಷ ಸರಕಾರ ರಚಿಸುವ ಪ್ರಸ್ತಾವಕ್ಕೆ ಅನುವಾಗುವಂತೆ ರಾಜಪಕ್ಸೆ ಹಾಗೂ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ತಕ್ಷಣ ರಾಜೀನಾಮೆ ನೀಡುವಂತೆ ಸ್ಪೀಕರ್ ಮಹಿಂದಾ ಯಪ ಅಭಯವರ್ಧನ ತುರ್ತುಸಭೆಯ ಬಳಿಕ ಸೂಚಿಸಿದ್ದಾರೆ.
"ಶಾಂತಿಯುತವಾಗಿ ಅಧಿಕಾರ ವರ್ಗಾವಣೆಗೆ ಅನುವು ಮಾಡಿಕೊಡುವ ಸಲುವಾಗಿ ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ" ಎಂದು ಅಭಯವರ್ದನ ಟಿವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉದ್ದೇಶಿತ ವಾರಾಂತ್ಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಧ್ಯಕ್ಷರು ಶುಕ್ರವಾರ ಅಧಿಕೃತ ನಿವಾಸವನ್ನು ತೊರೆದು ಭೂಗತರಾಗಿದ್ದಾರೆ. ಸರ್ವ ಪಕ್ಷ ಸರಕಾರ ರಚನೆಗೆ ಅನುಕೂಲವಾಗುವಂತೆ ಪ್ರಧಾನಿ ವಿಕ್ರಮಸಿಂಘೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ಅರಮನೆಗೆ ನುಗ್ಗಿ ದಾಂಧಲೆ ನಡೆಸಿದರು. ಅರಮನೆಯ ಕೊಠಡಿಗಳು ಹಾಗೂ ಕಾರಿಡಾರ್ಗಳು ಪ್ರತಿಭಟನಾಕಾರರಿಂದ ತುಂಬಿದ್ದಲ್ಲದೇ, ಈಜುಕೊಳಕ್ಕೂ ಪ್ರತಿಭಟನಾಕಾರರು ಧುಮುಕಿದರು. ಅರಮನೆಯ ಪಾಕಶಾಲೆಯಲ್ಲೇ ಆಹಾರವನ್ನೂ ಸೇವಿಸಿದರು. ಇದಾದ ಸ್ವಲ್ಪಸಮಯದಲ್ಲೇ ಅಧ್ಯಕ್ಷರ ಬಂದರು ಕಚೇರಿ ಕೂಡಾ ಪ್ರತಿಭಟನಾಕಾರರ ವಶವಾಯಿತು.