ಭಾರತ ಸೇರಿ ಹಲವು ದೇಶಗಳಲ್ಲಿನ ಉಕ್ರೇನ್ ರಾಯಭಾರಿಗಳನ್ನು ಉಚ್ಚಾಟಿಸಿದ ಝೆಲೆನ್ಸ್ಕಿ

Photo:twitter
ಕೀವ್: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶನಿವಾರ ಜರ್ಮನಿ, ಭಾರತ, ಝೆಕ್ ಗಣರಾಜ್ಯ, ನಾರ್ವೆ ಹಾಗೂ ಹಂಗೇರಿಯಲ್ಲಿರುವ ಉಕ್ರೇನ್ ರಾಯಭಾರಿಗಳನ್ನು ತಕ್ಷಣದಿಂದ ಜಾರಿಯಾಗುವಂತೆ ಉಚ್ಚಾಟಿಸಿದ್ದಾರೆ. ಹಲವು ಮಂದಿ ಇತರ ವಿದೇಶಿ ರಾಯಭಾರಿಗಳನ್ನು ಕೂಡಾ ಪದಚ್ಯುತಗೊಳಿಸಲಾಗಿದೆ ಎಂದು ಅಧ್ಯಕ್ಷರ ಅಧಿಕೃತ ವೆಬ್ಸೈಟ್ ತಿಳಿಸಿದೆ.
ಆದರೆ ಈ ಉನ್ನತ ರಾಜತಾಂತ್ರಿಕರ ಉಚ್ಚಾಟನೆಗೆ ಯಾವುದೇ ಕಾರಣಗಳನ್ನು ನೀಡಿಲ್ಲ. ರಾಜತಾಂತ್ರಿಕ ಅಧಿಕಾರಿಗಳಿಗೆ ಹೊಸ ಹೊಣೆಯನ್ನು ನೀಡಲಾಗುತ್ತದೆಯೇ ಎನ್ನುವುದು ಕೂಡಾ ಸ್ಪಷ್ಟವಾಗಿಲ್ಲ.
ರಷ್ಯಾ ಫೆಬ್ರವರಿ 24ರಿಂದ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯಿಂದ ಕಂಗೆಟ್ಟಿರುವ ದೇಶಕ್ಕೆ ಅಂತರರಾಷ್ಟ್ರೀಯ ಬೆಂಬಲ ಹಾಗೂ ಸೇನ ನೆರವನ್ನು ದೊರಕಿಸಿಕೊಡುವಂತೆ ಈಗಾಗಲೇ ಝೆಲೆನ್ಸ್ಕಿ ಎಲ್ಲ ರಾಯಭಾರಿಗಳಿಗೆ ಸೂಚನೆ ನೀಡಿದ್ದರು. ಉಕ್ರೇನ್ ಹಾಗೂ ಜರ್ಮನಿ ನಡುವಿನ ಸಂಬಂಧ ತೀರಾ ಸೂಕ್ಷ್ಮ ವಿಚಾರವಾಗಿದೆ.
ಉಕ್ರೇನ್ ರಾಜಧಾನಿಗೆ ವಿದ್ಯುತ್ ಪೂರೈಸುವ ಜರ್ಮನಿ ನಿರ್ಮಿತ ಟರ್ಬೈನ್ ಅನ್ನು ಕೆನಡಾ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿ ಹಾಗೂ ಉಕ್ರೇನ್ ನಡುವಿನ ಸಂಬಂಧ ತೀರಾ ಸೂಕ್ಷ್ಮ ವಿಚಾರವಾಗಿದೆ. ಯೂರೋಪ್ಗೆ ಅನಿಲವನ್ನು ಪಂಪ್ ಮಾಡಲು ಅನುವಾಗುವಂತೆ ಕೆನಡಾ ನಿರ್ವಹಿಸುತ್ತಿರುವ ಟರ್ಬೈನ್ಗಳನ್ನು ರಷ್ಯಾದ ನೈಸರ್ಗಿಕ ಅನಿಲ ಕಂಪನಿಯಾದ ಗಝ್ಪ್ರೋನ್ಗೆ ಹಿಂದಿರುಗಿಸುವಂತೆ ಜರ್ಮನಿ ಸೂಚಿಸಿದೆ. ಆದರೆ ಟರ್ಬೈನನ್ನು ತನ್ನ ಬಳಿಯೇ ಉಳಿಸಿಕೊಳ್ಳುವಂತೆ ಕೆನಡಾವನ್ನು ಉಕ್ರೇನ್ ಆಗ್ರಹಿಸಿದ್ದು, ರಷ್ಯಾಗೆ ಅದನ್ನು ವರ್ಗಾಯಿಸುವುದು ಆರ್ಥಿಕ ದಿಗ್ಭಂಧನ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಪಾದಿಸಿದೆ.