ಅಧ್ಯಕ್ಷರ ನಿವಾಸದಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕಿದೆ ಎಂದ ಲಂಕಾ ಪ್ರತಿಭಟನಾಕಾರರು: ವರದಿ

Photo: Twitter/@SriLankaTweet
ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಸರಕಾರಿ ವಿರೋಧಿ ಪ್ರತಿಭಟನಾಕಾರರು ಅಧ್ಯಕ್ಷರ ಭವನದಲ್ಲಿ ತಾವು ಲಕ್ಷಾಂತರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ ಎಂದು ರವಿವಾರ ಮಾಧ್ಯಮ ವರದಿ ಮಾಡಿದೆ.
ಪ್ರತಿಭಟನಾಕಾರರು ಪತ್ತೆಯಾದ ಕರೆನ್ಸಿ ನೋಟುಗಳನ್ನು ಎಣಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ಭದ್ರತಾ ಘಟಕಗಳಿಗೆ ಹಸ್ತಾಂತರಿಸಲಾಗುವುದು ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.
ಸಂಬಂಧಪಟ್ಟ ಸಂಗತಿಗಳನ್ನು ಪರಿಶೀಲಿಸಿದ ನಂತರ ವಾಸ್ತವ ಪರಿಸ್ಥಿತಿಯನ್ನು ಪ್ರಕಟಿಸಲು ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿನಪತ್ರಿಕೆ ವರದಿ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ದ್ವೀಪ ರಾಷ್ಟ್ರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನಡುವೆ ರಾಜಪಕ್ಸೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ನೂರಾರು ಆಡಳಿತ ವಿರೋಧಿ ಪ್ರತಿಭಟನಾಕಾರರು ಶನಿವಾರ ಮಧ್ಯ ಕೊಲಂಬೊದ ಹೈ-ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿನ ಬ್ಯಾರಿಕೇಡ್ಗಳನ್ನು ಮುರಿದು ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿದರು. ಪ್ರತಿಭಟನಾಕಾರರ ಮತ್ತೊಂದು ಗುಂಪು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿತ್ತು.