ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಹೇಗೆ ಸಂಭವಿಸುತ್ತವೆ?

ವಿಮಾನಗಳ ನಿರ್ವಹಣೆಯನ್ನು ಯಾರು ಮಾಡುತ್ತಾರೆ?
ಮೇಲೆ ತಿಳಿಸಿದ ಎಲ್ಲ ವಿಮಾನಯಾನ ಕಂಪೆನಿಗಳ ವಿಮಾನಗಳು ಭಾರತದಲ್ಲಿ ಹಾರುತ್ತವೆ. ಈ ವಿಮಾನಗಳ ನಿರ್ವಹಣೆಯನ್ನು ಒಂದೋ ಸ್ವತಃ ಅವುಗಳ ಕಂಪೆನಿಯೇ ಮಾಡುತ್ತದೆ ಅಥವಾ ಬಾಹ್ಯ ನಿರ್ವಹಣಾ ಕಂಪೆನಿಗಳ ಸೇವೆಗಳನ್ನು ಪಡೆದುಕೊಳ್ಳುತ್ತವೆ. ಅಂದ ಹಾಗೆ, ಭಾರತದಲ್ಲಿರುವ ಹೆಚ್ಚಿನ ವಿಮಾನಯಾನ ಕಂಪೆನಿಗಳ ವಿಮಾನಗಳ ನಿರ್ವಹಣೆಯನ್ನು ‘ಏರ್ ಇಂಡಿಯಾ ಇಂಜಿನಿಯರಿಂಗ್’ ಮಾಡುತ್ತಿದೆ. ಏರ್ ಇಂಡಿಯಾ ಇಂಜಿನಿಯರಿಂಗ್ ಸಂಪೂರ್ಣ ಪ್ರತ್ಯೇಕ ಕಂಪೆನಿಯಾಗಿದೆ. ಏರ್ ಇಂಡಿಯಾ ಏರ್‌ಲೈನ್ಸ್ ಕಂಪೆನಿಯನ್ನು ಟಾಟಾ ಗುಂಪಿಗೆ ಮಾರಾಟ ಮಾಡಲಾಗಿದೆಯಾದರೂ, ಏರ್ ಇಂಡಿಯಾ ಇಂಜಿನಿಯರಿಂಗ್ ಈಗಲೂ ಸರಕಾರದ ಬಳಿಯೇ ಇದೆ.
ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚುತ್ತಿದ್ದು, ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಈ ತಾಂತ್ರಿಕ ದೋಷಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ವಾಯುಯಾನ ಕ್ಷೇತ್ರವು ಚಿಂತೆಗೊಳಗಾಗಿದೆ. ಇತ್ತೀಚಿನ ದಿನಗಳಲ್ಲಿ, ವಿಸ್ತಾರ, ಸ್ಪೈಸ್‌ಜೆಟ್ ಮತ್ತು ಇಂಡಿಗೋ ಎಂಬ ಮೂರು ಪ್ರಮುಖ ಏರ್‌ಲೈನ್‌ಗಳು ತಾಂತ್ರಿಕ ದೋಷಗಳು ಮತ್ತು ಇತರ ಸಮಸ್ಯೆಗಳನ್ನು ಎದುರಿಸಿವೆ ಹಾಗೂ ಈ ಕಾರಣದಿಂದಾಗಿ ತುರ್ತು ಭೂಸ್ಪರ್ಶ ಮಾಡುವ ಅನಿವಾರ್ಯತೆಗೆ ಒಳಗಾಗಿವೆ.
ಪ್ರತೀ ವಿಮಾನವು ವಿವಿಧ ಹಂತಗಳಲ್ಲಿ ನಿರ್ವಹಣೆ ಮತ್ತು ಪರೀಕ್ಷೆಗಳಿಗೆ ಒಳಗಾಗುತ್ತವೆ. ಪ್ರತೀ ಹಾರಾಟಕ್ಕೆ ಮುನ್ನ, ಪೈಲಟ್ ಮತ್ತು ನಿರ್ವಹಣಾ ಸಿಬ್ಬಂದಿ ಜೊತೆಯಾಗಿ ಕಾಕ್‌ಪಿಟ್‌ನಿಂದ ವಿಮಾನಗಳ ವಿವಿಧ ಭಾಗಗಳನ್ನು ತಪಾಸಣೆ ಮಾಡುತ್ತಾರೆ. ಇದಕ್ಕೆ ಹೊರತಾಗಿ, ಬಹುತೇಕ ಪ್ರತಿದಿನ ಪ್ರಾಥಮಿಕ ತಪಾಸಣೆಗಳನ್ನು ಮಾಡಲಾಗುತ್ತದೆ. ಆದರೆ ಇವಿಷ್ಟೇ ಸಾಕಾಗುವುದಿಲ್ಲ. ತಪಾಸಣೆಗಳನ್ನು ‘ಎ’ಯಿಂದ ‘ಡಿ’ವರೆಗೆ ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಪ್ರತೀ ತಪಾಸಣೆಯ ವಿಧಾನ ಮತ್ತು ಸಮಯ ಭಿನ್ನ.
ವಾಣಿಜ್ಯ ವಿಮಾನಗಳನ್ನು ನಿಯಮಿತ ಮತ್ತು ತೀವ್ರ ತಪಾಸಣೆಗಳಿಗೆ ಒಳಪಡಿಸಲಾಗುತ್ತದೆ. ಒಮ್ಮೆ ವಿಮಾನ ಹಾರಾಟದಲ್ಲಿ ತರಬೇತಿ ಪಡೆದ ಬಳಿಕ, ಬಹುಶಃ ವಿಮಾನವನ್ನು ರಸ್ತೆಯಲ್ಲಿ ಚಲಾಯಿಸುವುದಕ್ಕಿಂತ ಆಕಾಶದಲ್ಲಿ ಹಾರಿಸುವುದೇ ಸುಲಭ. ಆದರೆ ವಿಮಾನದ ನಿರ್ವಹಣೆ ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ, ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಸಂಭವಿಸಿದ ಹಲವು ಘಟನೆಗಳು ನಡೆದಿವೆ.
ಬ್ಯಾಂಕಾಕ್-ದಿಲ್ಲಿ ವಿಸ್ತಾರ ವಿಮಾನದ ಇಂಜಿನ್ ವೈಫಲ್ಯ
ಇತ್ತೀಚೆಗೆ ವಿಸ್ತಾರ ಏರ್‌ಲೈನ್ಸ್‌ನ ಬ್ಯಾಂಕಾಕ್-ದಿಲ್ಲಿ ವಿಮಾನದ ಇಂಜಿನ್ ವಿಫಲಗೊಂಡಿತು. ಹಾಗಾಗಿ, ವಿಮಾನವು ಒಂದೇ ಇಂಜಿನ್ ಮೂಲಕ ಹೊಸದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದ ಇಂಜಿನ್‌ನ ಇಲೆಕ್ಟ್ರಿಕ್ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಇಡೀ ಇಂಜಿನ್ ನಿಷ್ಕ್ರಿಯಗೊಂಡಿತು.
ನೆಮ್ಮದಿಯ ವಿಚಾರವೆಂದರೆ, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲ.
ಇಂಡಿಗೋ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ
ಮೊನ್ನೆ ಮಂಗಳವಾರ, ಇಂಡಿಗೋ ಏರ್‌ಲೈನ್ಸ್‌ನ ರಾಯಪುರ-ಇಂದೋರ್ ಏರ್‌ಬಸ್ ಎ-320 ನಿಯೋ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿತು. ವಿಮಾನವು ಇಂದೋರ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಕ್ಯಾಬಿನ್‌ನಲ್ಲಿ ಹೊಗೆ ಇರುವುದನ್ನು ವಿಮಾನದ ಸಿಬ್ಬಂದಿ ಗಮನಿಸಿದರು. ಈ ಘಟನೆಯಲ್ಲೂ ಯಾರಿಗೂ ಹಾನಿಯಾಗಿಲ್ಲ.
ಸ್ಪೈಸ್‌ಜೆಟ್: 18 ದಿನಗಳಲ್ಲಿ 8 ತಾಂತ್ರಿಕ ದೋಷ
ಭಾರತದಲ್ಲಿ ಹಾರಾಡುವ ಸ್ಪೈಸ್‌ಜೆಟ್ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿರುವುದು ಚಿಂತೆಗೆ ಕಾರಣವಾಗಿದೆ. ಈ ಏರ್‌ಲೈನ್ಸ್‌ನ ವಿಮಾನಗಳಲ್ಲಿ ಕಳೆದ 18 ದಿನಗಳಲ್ಲಿ ಎಲ್ಲಾ ರೀತಿಯ ತೊಂದರೆಗಳು ಕಾಣಿಸಿಕೊಂಡಿವೆ. ಕಳೆದ 18 ದಿನಗಳಲ್ಲೇ, ಸ್ಪೈಸ್‌ಜೆಟ್ ವಿಮಾನಗಳು 8 ಬಾರಿ ತಾಂತ್ರಿಕ ದೋಷಕ್ಕೆ ಒಳಗಾಗಿವೆ. ಮಂಗಳವಾರ ಒಂದೇ ದಿನ ಇಂತಹ ಮೂರು ಪ್ರಕರಣಗಳು ವರದಿಯಾಗಿವೆ.
ಸ್ಪೈಸ್‌ಜೆಟ್ ವಿಮಾನಗಳಲ್ಲಿ ಪದೇ ಪದೇ ಸುರಕ್ಷತಾ ವೈಫಲ್ಯಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ)ವು ಅದಕ್ಕೆ ಶೋಕಾಸ್ ನೋಟಿಸ್ ನೀಡಿದೆ. ಮೂರು ವಾರಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಸ್ಪೈಸ್‌ಜೆಟ್‌ಗೆ ಸೂಚಿಸಲಾಗಿದೆ.
ವಿಮಾನಗಳ ನಿರ್ವಹಣೆ ದೊಡ್ಡ ಉದ್ಯಮ
ಪ್ರಸ್ತುತ, ದೇಶದಲ್ಲಿ ವಿಮಾನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿರ್ವಹಣೆಯ ಕೆಲಸವೂ ತುಂಬಾ ಹೆಚ್ಚಿದೆ. ವಿಮಾನಗಳ ನಿರ್ವಹಣೆಯೂ ದೊಡ್ಡ ಉದ್ದಿಮೆಯಾಗಿ ಹೊರಹೊಮ್ಮುತ್ತಿದೆ. ವಿಮಾನಗಳ ನಿರ್ವಹಣೆಯಲ್ಲಿ ತೊಡಗಿರುವ ಕಂಪೆನಿಗಳು, ವಿಮಾನಗಳ ದುರಸ್ತಿ, ನಿರ್ವಹಣೆ ಮತ್ತು ನವೀಕರಣದ ಹೊಣೆಗಳನ್ನು ಹೊತ್ತಿವೆ. ಏರ್‌ವರ್ಕ್ಸ್, ಮ್ಯಾಕ್ಸ್ ಏರೋಸ್ಪೇಸ್ ಗ್ರೂಪ್, ಏರ್ ಇಂಡಿಯಾ ಇಂಜಿನಿಯರಿಂಗ್, ಜಿಎಮ್‌ಆರ್ ಮುಂತಾದ ಕಂಪೆನಿಗಳು ವಿಮಾನಗಳ ನಿರ್ವಹಣೆ ಕ್ಷೇತ್ರದಲ್ಲಿ ಇವೆ. ಸ್ಪೈಸ್‌ಜೆಟ್‌ನ ಒಂದು ಸಹಸಂಸ್ಥೆಯೂ ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಕೆಲಸದಲ್ಲಿ ತೊಡಗಿದೆ.
ವಿಮಾನಗಳ ನಿರ್ವಹಣೆ ಮತ್ತು ತಪಾಸಣೆ
ಪ್ರತೀ ವಾಣಿಜ್ಯ ವಿಮಾನದ ನಿರ್ವಹಣೆ ಮತ್ತು ತಪಾಸಣೆ ಕಾರ್ಯವನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ, ಪ್ರತೀ ಹಾರಾಟದ ಮುನ್ನ ಪ್ರತಿಯೊಂದು ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ. ಇದನ್ನು ಪೈಲಟ್ ಅಥವಾ ಸಹಪೈಲಟ್ ನಿರ್ವಹಣಾ ಸಿಬ್ಬಂದಿಯೊಂದಿಗೆ ಸೇರಿ ನಡೆಸುತ್ತಾರೆ. ಈ ತಪಾಸಣೆಯ ವೇಳೆ, ಪೈಲಟ್‌ಗಳು ಕ್ಯಾಬಿನ್ ಸಿಬ್ಬಂದಿಗೆ ಸಂಬಂಧಿಸಿದ ಉಪಕರಣಗಳ ತಪಾಸಣೆ ಮಾಡುತ್ತಾರೆ. ಕೆಲವು ತಪಾಸಣೆಗಳನ್ನು ಎರಡು ದಿನಗಳಿಗೊಮ್ಮೆ ಮಾಡಿದರೆ, ಕೆಲವನ್ನು ವಿಮಾನವು ಪ್ರತೀ 300-400 ಗಂಟೆಗಳ ಹಾರಾಟವನ್ನು ಪೂರೈಸಿದ ಬಳಿಕ ನಡೆಸಲಾಗುತ್ತದೆ. ಎರಡನೇ ತಪಾಸಣೆಯಲ್ಲಿ, ವಿಮಾನವನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಸಂಕೀರ್ಣ ಯಾಂತ್ರಿಕ ರಚನೆ
ವಿಮಾನವೊಂದರ ತಾಂತ್ರಿಕ ರಚನೆ ತುಂಬಾ ಸಂಕೀರ್ಣವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ವಿಮಾನದಲ್ಲಿ ಸಾವಿರಾರು ಬಿಡಿ ಭಾಗಗಳಿವೆ. ಪ್ರತಿಯೊಂದನ್ನು ಜೋಡಿಸಿ ಹಾರುವ ಯಂತ್ರವನ್ನಾಗಿ ಮಾಡಲಾಗಿದೆ. ವಿಮಾನದ ಒಳಗಡೆ ಕೇಬಲ್‌ಗಳು ಮತ್ತು ತಂತಿಗಳ ರಚನೆಯಿದೆ. ಇವೆಲ್ಲವುಗಳನ್ನು ಪ್ರತೀ ದಿನ ತಪಾಸಣೆ ನಡೆಸಲು ಸಾಧ್ಯವಿಲ್ಲ. ಅದೂ ಅಲ್ಲದೆ, ಆಕಾಶದಲ್ಲಿ ಹಾರುವ ಎಲ್ಲಾ ವಿಮಾನಗಳು ಒಂದೇ ಅಲ್ಲ, ಅವುಗಳಲ್ಲಿ ಭಿನ್ನ ಮಾದರಿಗಳಿವೆ. ಅವುಗಳ ಇಡೀ ಯಾಂತ್ರಿಕ ವ್ಯವಸ್ಥೆ ಸಂಕೀರ್ಣವಾಗಿದೆ.
ವಿಮಾನಗಳ ನಿರ್ವಹಣೆಯ ವಿಧಗಳು
ವಿಮಾನಗಳ ತಪಾಸಣೆ ಮತ್ತು ನಿರ್ವಹಣೆಯಲ್ಲಿ ಎರಡು ವಿಸ್ತೃತ ವಿಧಗಳಿವೆ. ಮೊದಲನೆಯದು, ವಿಮಾನಗಳ ಹಾರಾಟ ಪೂರ್ವ ತಪಾಸಣೆ ಮತ್ತು ಎರಡನೆಯದು, ಪ್ರಾಥಮಿಕ ತಪಾಸಣೆ.
ವಿಮಾನಗಳ ಹಾರಾಟ ಪೂರ್ವ ತಪಾಸಣೆ
ಇಲ್ಲಿ ನಿರ್ವಹಣಾ ಸಿಬ್ಬಂದಿಯು ಪೈಲಟ್ ಜೊತೆಗೆ ಕ್ಯಾಬಿನ್ ತಪಾಸಣೆ ಮಾಡುತ್ತಾರೆ. ಎಲ್ಲವೂ ಸರಿಯಿದೆ ಎನ್ನುವುದು ದೃಢಪಟ್ಟ ಬಳಿಕವಷ್ಟೇ ನಿರ್ವಹಣಾ ಸಿಬ್ಬಂದಿ ಹೊರಹೋಗುತ್ತಾರೆ. ಹಾರಾಟ ಪೂರ್ವ ತಪಾಸಣೆಗಳಿಗೆ ಪ್ರಧಾನವಾಗಿ ಪೈಲಟ್ ಅಥವಾ ಸಹಪೈಲಟ್ ಜವಾಬ್ದಾರರು. ಅವರು ಬಾಹ್ಯ ವಾಕರೌಂಡನ್ನು ಪರೀಕ್ಷಿಸುತ್ತಾರೆ, ಅಗತ್ಯ ಭಾಗಗಳನ್ನು ವೀಕ್ಷಿಸಿ ಪರಿಶೀಲನೆ ಮಾಡುತ್ತಾರೆ ಹಾಗೂ ಸೆನ್ಸರ್‌ಗಳು, ಪ್ರೋಬ್‌ಗಳು, ಸ್ಟ್ರಕ್ಚರಲ್ ಕಾಂಪೊನೆಂಟ್‌ಗಳು, ಮೋಟರ್‌ಗಳು ಮತ್ತು ಕೇಬಲ್(ವಿಶೇಷವಾಗಿ ಗಿಯರ್‌ಗಳಿಗೆ ಸಂಬಂಧಪಟ್ಟ ಕೇಬಲ್‌ಗಳು)ಗಳನ್ನು ಪರಿಶೀಲಿಸುತ್ತಾರೆ. ಇವುಗಳಲ್ಲದೆ, ವಿಮಾನದ ಬೆಂಕಿ ಪತ್ತೆ ಸಾಧನಗಳು, ಎಚ್ಚರಿಕೆ ದೀಪಗಳು, ಹವಾಮಾನ ರಾಡಾರ್ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ.
ಪ್ರಾಥಮಿಕ ಪರಿಶೀಲನೆ
ಈ ಪರಿಶೀಲನೆಯನ್ನು ಬಹುತೇಕ ಎರಡು ದಿನಗಳಿಗೊಮ್ಮೆ ನಡೆಸಲಾಗುತ್ತದೆ. ವಿಮಾನದ ಟಯರ್‌ಗಳಲ್ಲಿರುವ ಗಾಳಿಯಿಂದ ಹಿಡಿದು ಇಡೀ ವಿಮಾನದ ತಪಾಸಣೆಯನ್ನು ನಡೆಸಲಾಗುತ್ತದೆ. ಪ್ರತಿಯೊಂದನ್ನೂ ಕಂಪ್ಯೂಟರ್‌ಗಳ ಮೂಲಕ ಪರೀಕ್ಷಿಸಲಾಗುತ್ತದೆ. ಅಷ್ಟೇ ಅಲ್ಲದೆ, ಹಾರಾಟದ ವೇಳೆ ಯಾವುದಾದರೂ ಭಾಗ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬುದಾಗಿ ಪೈಲಟ್ ಅಥವಾ ಹಾರಾಟ ಸಿಬ್ಬಂದಿ ಭಾವಿಸಿದರೆ ಅವರು ನಿರ್ವಹಣಾ ಸಿಬ್ಬಂದಿಗೆ ತಿಳಿಸುತ್ತಾರೆ. ಅವರು ಆ ಸಂಬಂಧಿ ಭಾಗವನ್ನು ಸರಿಪಡಿಸುತ್ತಾರೆ ಅಥವಾ ಬೇರೆ ಭಾಗವನ್ನು ಹಾಕುತ್ತಾರೆ.
ವಿಮಾನಗಳ ಟಯರ್‌ಗಳಿಗೆ ಸಾರಜನಕ (ನೈಟ್ರೋಜನ್) ಅನಿಲವನ್ನು ಯಾಕೆ ತುಂಬುತ್ತಾರೆ?
ವಿಮಾನಗಳ ಚಕ್ರಗಳ ಟಯರ್‌ಗಳಿಗೆ ಸಾರಜನಕ ಅನಿಲವನ್ನು ತುಂಬುತ್ತಾರೆ. ಯಾಕೆಂದರೆ, ವಿಮಾನಗಳು ಅತ್ಯಂತ ಎತ್ತರದಲ್ಲಿ ಹಾರುವಾಗ ಎದುರಿಸಬಹುದಾದ ಅತಿ ಶೀತ, ಒತ್ತಡ ಮತ್ತು ಹವಾಮಾನ ಪರಿಸ್ಥಿತಿಗಳು ಸಾರಜನಕದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಸಾರಜನಕವು ಮೊದಲು ಇದ್ದ ಹಾಗೆಯೇ ಇರುತ್ತದೆ. ಆದರೆ, ಈ ತೀವ್ರ ಹವಾಮಾನ ಪರಿಸ್ಥಿತಿಗಳು, ಉಷ್ಣತೆ ಮತ್ತು ಒತ್ತಡವು ಸಾಮಾನ್ಯ ಗಾಳಿಯ ಮೇಲೆ ಅತ್ಯಂತ ಹೆಚ್ಚು ಪರಿಣಾಮವನ್ನು ಬೀರುತ್ತವೆ.







