ಆತ್ಮಹತ್ಯೆ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ; ಪ್ರಕರಣ ದಾಖಲು
ಉಳ್ಳಾಲ: ಮಹಿಳೆಯೋರ್ವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಉಳ್ಳಾಲ ಠಾಣೆ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ರವಿವಾರ ಪತ್ತೆಯಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಮೃತ ಮಹಿಳೆಯನ್ನು ಜಂಶೀರ (25) ಎಂದು ಗುರುತಿಸಲಾಗಿದೆ.
ಮಿಲ್ಲತ್ ನಗರ ನಿವಾಸಿ ಜಂಶೀರ ಎರಡು ವರ್ಷಗಳ ಹಿಂದೆ ಮುಕ್ಕಚ್ಚೇರಿ ನಿವಾಸಿ ಇರ್ಫಾನ್ ಜೊತೆ ವಿವಾಹ ಆಗಿತ್ತು. ವಿವಾಹದ ಬಳಿಕ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಹಿರಿಯರು ಸೇರಿ ಮಾತುಕತೆ ಕೂಡಾ ನಡೆಸಿದ್ದರು.
ರವಿವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತಿ ಇರ್ಫಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಇರ್ಫಾನ್ ನನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಜಂಶೀರ ನನ್ನು ಕೊಲೆ ಮಾಡಿರಬೇಕು ಎಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಕೆಯ ಸಾವು ಕೊಲೆಯೋ, ಆತ್ಮಹತ್ಯೆಯೊ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪೋಸ್ಟ್ ಮಾರ್ಟಂ ವರದಿಗಾಗಿ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕೊಲೆಯೋ ಆತ್ಮಹತ್ಯೆಯೊ ಎಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.