ದಕ್ಷಿಣ ಕನ್ನಡವನ್ನು ನೆರೆ ಪೀಡಿತ ಜಿಲ್ಲೆಯಾಗಿ ಘೋಷಣೆ ಅಗತ್ಯ: ಐವನ್ ಡಿಸೋಜ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಸಾಕಷ್ಟು ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಯನ್ನು ನೆರೆ ಪೀಡಿತ ಜಿಲ್ಲೆ ಯೆಂದು ಘೋಷಿಸಿ ಪರಿಹಾರ ಒದಗಿಸಬೇಕೆಂದು ಮಾಜಿ ಶಾಸಕ ಐವನ್ ಡಿ ಸೋಜ ಸುದ್ದಿ ಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಮಳೆಯಿಂದಾಗಿ ಜಿಲ್ಲೆಯಲ್ಲಿ 429 ಮನೆ ಭಾಗಶಃ ಹಾನಿಗೀಡಾಗಿದೆ. 56ಮನೆಗಳು ಸಂಪೂರ್ಣ ಹಾನಿಗೀಡಾಗಿದೆ. ಸರ್ಕಾರ 5 ಕೋಟಿ ರೂ ಪರಿಹಾರ ನೀಡುವುದಾಗಿ ತಿಳಿಸಿದೆ. ಕಳೆದ ಬಾರಿ ಮಳೆಯಿಂದ ಹಾನಿಗೀಡಾದ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ದೊರೆತ್ತಿಲ್ಲ. ಈ ಬಾರಿ ಪರಿಹಾರ ಘೋಷಿಸಿದ ರೀತಿಯೂ ಸರಿಯಿಲ್ಲ. ಸಂಪೂರ್ಣ ಹಾನಿಗೀಡಾದ ಮನೆಗೆ 90 ಸಾವಿರ ರೂ, ಭಾಗಶಃ ಹಾನಿಗೀಡಾದ ಮನೆಗೆ 10ಸಾವಿರ ರೂ ಪರಿಹಾರ ಎಂದು ಘೋಷಣೆ ಮಾಡಿರುವ ಮೊತ್ತ ದಿಂದ ಸಂತ್ರಸ್ತರಿಗೆ ಸಹಾಯ ಮಾಡಿದಂತಾಗುವುದಿಲ್ಲ. ಪರಿಹಾರದ ಮೊತ್ತ ವನ್ನು ಹೆಚ್ಚಿಸಬೇಕು. ಸರ್ಕಾರ ಜಿಲ್ಲೆ ಯನ್ನು ನೆರೆಪೀಡಿತ ಪ್ರದೇಶ ಎಂದು ಘೋಷಣೆ ಮಾಡುವುದರಿಂದ ಮಳೆಯಿಂದ ಹಾನಿಗೀಡಾದ ಸಂತ್ರಸ್ತರಿಗೆ,ಬೆಳೆಗಾರರಿಗೆ ನೆರವಾಗಲು ಸಾಧ್ಯವಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ರಾಜ್ಯ ಕಂಡ ಅತ್ಯುತ್ತಮ ನಾಯಕ, ಸಾಮಾಜಿಕ ನ್ಯಾಯದ ಪ್ರತಿಪಾದಕ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 75 ಹುಟ್ಟು ಹಬ್ಬ ಆ.3ರಂದು ದಾವಣಗೆರೆ ಯಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಅಭಿಮಾನಿಗಳು ಸೇರಿ ನಡೆಸಲು ನಿರ್ಧರಿಸಲಾಗಿದೆ. ಅವರ ಸೇವೆಯನ್ನು ಜನತೆಗೆ ನೆನಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಮುಖಂಡ ರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಐವನ್ ಡಿ ಸೋಜ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಮನಪಾ ಸದಸ್ಯ ರಾದ ಭಾಸ್ಕರ ರಾವ್,ಸಬಿತಾ ಮಿಸ್ಕಿತ್, ಕೆಪಿಸಿಸಿ ಕಾರ್ಯ ದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







