ಬಂಟ್ವಾಳದಲ್ಲಿ ಮಳೆಯಿಂದ ವ್ಯಾಪಕ ಹಾನಿ; ರಮಾನಾಥ ರೈ ಪರಿಶೀಲನೆ: ಪರಿಹಾರಕ್ಕೆ ಒತ್ತಾಯ

ಬಂಟ್ವಾಳ, ಜು.11: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲೂಕಿನ ವಿವಿಧೆಡೆ ವ್ಯಾಪಕ ಹಾನಿ ಸಂಭವಿಸಿದ್ದು ಇಲ್ಲಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಅರಳ, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಕಾವಳಮೂಡೂರು, ಪಂಜಿಕಲ್ಲು ಗ್ರಾಮಗಳಲ್ಲಿ ಧರೆ ಕುಸಿದು ಮನೆಗಳು ಹಾನಿಗೊಂಡಿವೆ. ಹಾನಿಗೊಂಡ ಮನೆಗಳಿಗೆ ಭೇಟಿ ನೀಡಿ ರಮಾನಾಥ ರೈ ಅಹವಾಲು ಸ್ವೀಕರಿಸಿ ಬಳಿಕ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿ ಟಿಪ್ಪು ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆ ಹಾನಿಯಾಗಿದ್ದು ಸುಮಾರು 75ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾನಿಯಾದ ಸ್ಥಳಗಳ ಪರಿಶೀಲನೆ ನಡೆಸಿದ ಬಳಿಕ ಸ್ಥಳದಲ್ಲೇ ಜಿಲ್ಲಾಧಿಕಾರಿಯನ್ನು ಫೋನ್ ಮೂಲಕ ಸಂಪರ್ಕಿಸಿದ ರಮಾನಾಥ ರೈ ಸಂತ್ರಸ್ತರಿಗೆ ಶೀರ್ಘವೇ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಚಂದ್ರಶೇಖರ್ ಕರ್ಣ, ಮಾಣಿಕ್ಯ ರಾಜ್ ಜೈನ್, ಜನಾರ್ದನ್ ಸಪಲ್ಯ ಪ್ರಮುಖರು ಉಪಸ್ಥಿತರಿದ್ದರು.