ಎಸ್‌ಸಿಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ಧರಣಿ

ಉಡುಪಿ, ಜು.೧೧: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸ್ವಾಭಿಮಾನಿ ಎಸ್‌ಸಿಎಸ್‌ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.
ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ವರದಿಯ ಶಿಫಾರಸ್ಸಿನ ಪ್ರಕಾರ ಎಸ್‌ಸಿಗೆ ಶೇ.೧೭ ಮತ್ತು ಎಸ್‌ಟಿಗೆ ಶೇ.೭ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಅಂಬೇಡ್ಕರ್ ಫೋಟೋ ಹೊರತೆಗಿಸಿ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಸೇವೆಯಿಂದ ವಜಾ ಮಾಡಿ ಬಂಧಿಸಬೇಕು. ಸರಕಾರಿ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಬೇಕು.
ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಬಡವಹರಿಗೆ ೯೪ಸಿ, ೯೪ಸಿಸಿ ಅಡಿಯಲ್ಲಿ ಕೂಡಲೇ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಕಂದಾಯ ಸಚಿವರು ಗೋಮಾಳ ಮತ್ತಿತ್ತರ ಸರಕಾರಿ ಜಮೀನುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ರಚಿಸಿರುವ ಉಪಸಮಿತಿಯನ್ನು ರದ್ದುಗೊಳಿಸಬೇಕು. ಎಸ್‌ಸಿಎಸ್‌ಟಿ ರೈತರಿಗೆ ಭೂಮಿ ಹಕ್ಕನ್ನು ಒದಗಿಸಬೇಕು.
ರಾಜ್ಯದಲ್ಲಿ ೧೧ ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಎಸ್‌ಸಿಎಸ್‌ಟಿಗಳಿಗೆ ಸ್ಮಶಾನ ಭೂಮಿ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ಕ್ಷೇತ್ರದಲ್ಲಿ ಎಸ್‌ಸಿ ಎಸ್‌ಟಿ ಹಾಗೂ ಇತರೆ ಹಿಂದುಳಿದವರ್ಗಗಳಿಗೆ ಮೀಸಲಾತಿ ನೀಡಬೇಕು. ಶಿಕ್ಷಣದಲ್ಲಿ ಎಸ್‌ಸಿಎಸ್‌ಟಿ ಒಬಿಸಿಗಳಿಗೆ ಮೀಸಲಾತಿಯನ್ನು ಮುಂದುವರೆಸ ಬೇಕು. ಸರಕಾರಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಕೂಡಲೇ ತುಂಬಬೇಕು ಎಂದು ಧರಣಿ ನಿರಂತರು ಒತ್ತಾಯಿಸಿದರು.
ಧರಣಿಯನ್ನುದ್ದೇಶಿಸಿ ಸಮಿತಿಯ ಜಿಲ್ಲಾಧ್ಯಕ್ಷ ಅನಂತ ನಾಯ್ಕ, ಉಪಾಧ್ಯಕ್ಷ ಸುಂದರ್ ಮಾಸ್ತರ್ ಹಾಗೂ ಕಾರ್ಯದರ್ಶಿ ಗಣೇಶ್ ಕುಂದಾಪುರ ಮಾತ ನಾಡಿದರು. ಬಳಿಕ ಜಿಲ್ಲಾಧಿಕಾರಿ ಕೂರ್ಮಾರಾವ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ದೇವೇಂದ್ರ ನಾಯ್ಕ, ಭೋಜ ನಾಯ್ಕ, ನಾರಾಯಣ ನಾಯ್ಕ, ಕೆ.ಟಿ.ನಾಯ್ಕ, ಕೃಷ್ಣ ನಾಯ್ಕ, ಪರಮೇಶ್ವರ ಉಪ್ಪೂರು, ಜಯರಾಮ ನಾಯ್ಕ, ಸಂತೋಷ್ ನಾಯ್ಕ, ಸುರೇಶ್ ಪಡುಬಿದ್ರಿ, ರಮೇಶ್ ಇಂದ್ರಾಳಿ, ರಾಮ ನಾಯ್ಕ್, ರಾಘವ ಬೆಳ್ಳೆ, ಗೋಪಿನಾಥ್, ಲಕ್ಷ್ಮಣ ನಾಯ್ಕ್ ಮೊದಲಾ ದವರು ಉಪಸ್ಥಿತರಿದ್ದರು.