ನಟ ಸುದೀಪ್ ವಿರುದ್ಧ ಅವಹೇಳನಕಾರಿ ಸಂದೇಶ ಆರೋಪ: ಪೊಲೀಸ್ ಆಯುಕ್ತರಿಗೆ ದೂರು

ಫೈಲ್ ಚಿತ್ರ- ನಟ ಸುದೀಪ್
ಬೆಂಗಳೂರು, ಜು.11: ಬಹುಭಾಷಾ ನಟ ಸುದೀಪ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಆರೋಪ ಸಂಬಂಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ದೂರು ಸಲ್ಲಿಕೆ ಮಾಡಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶ್ರೀ ಚರಣ್ ಹಾಗೂ ಅಹೋರಾತ್ರ ಎಂಬುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಏನಿದೆ?: ನಟ ಸುದೀಪ್ ಅವರ ವಿರುದ್ಧ ಅಹೋರಾತ್ರ ಮತ್ತು ಚರಣ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ, ಅವಹೇಳನಕಾರಿಯಾಗಿ ಪದಬಳಕೆ ಮಾಡುವ ಮೂಲಕ ಕನ್ನಡ ಸುದೀಪ್ ಅವರ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಹೇಳಿಕೆ ನೀಡಿರುವುದು ಬೇಸರದ ಸಂಗತಿ.
ಇನ್ನೂ, ಇಂತಹ ಹೇಳಿಕೆಗಳಿಂದ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸಾರ್ವಜನಿಕರಲ್ಲಿ ಇಲ್ಲಸಲ್ಲದ ಗೊಂದಲಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ತಾವು ಅಹೋರಾತ್ರ ಮತ್ತು ಚರಣ್ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಚಿತ್ರರಂಗದ ಹಾಗೂ ಕಲಾವಿದರ ಬೆಳವಣಿಗೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಸಹಕರಿಸಬೇಕು ಎಂದು ಉಲ್ಲೇಖಿಸಿದ್ದಾರೆ.





