ಮಂಗಳೂರು; ಗುತ್ತಿಗೆ ಆಧಾರಿತ ಅಗ್ನಿಪಥ್ ಯೋಜನೆ ವಿರೋಧಿಸಿ ಸಿಪಿಎಂ ಪ್ರತಿಭಟನೆ

ಮಂಗಳೂರು : ದೇಶದ ಸ್ವಾವಲಂಬನೆ ಮತ್ತು ಭದ್ರತೆಗೆ ಅಪಾಯ ತಂದೊಡ್ಡುವ ಹಾಗೂ ವಿದ್ಯಾರ್ಥಿ ಯುವಜನರ ಭವಿಷ್ಯಕ್ಕೆ ಮಾರಕ ಹೊಡೆತ ನೀಡುವ ಸೇನೆಯಲ್ಲಿ ೪ ವರ್ಷಗಳ ಗುತ್ತಿಗೆ ಆಧಾರಿತ ಅಗ್ನಿಪಥ್ ಯೋಜನೆ ಜಾರಿಗೊಳಿಸುವುದನ್ನು ವಿರೋಧಿಸಿ ಸಿಪಿಎಂ ದ.ಕ.ಜಿಲ್ಲ ಸಮಿತಿಯ ವತಿಯಿಂದ ಸೋಮವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ದೇಶದ ಭದ್ರತೆಗೆ ಸದಾ ಜಾಗೃತ ಸೈನಿಕ ವ್ಯವಸ್ಥೆ ಅನಿವಾರ್ಯವಾಗಿದೆ. ಅಂತಹ ಸೈನಿಕರಿಗೆ ಜೀವನಪರ್ಯಂತ ಸಂಪೂರ್ಣ ಸೇವಾ ಭದ್ರತೆ ಒದಗಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಲಪಂಥೀಯ ಸರಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡಿ ತಿಂಗಳಿಗೆ ೨೪ ಸಾವಿರ ರೂ. ಪಡೆಯುವ ಕೇವಲ ನಾಲ್ಕು ವರ್ಷಗಳ ಅವಧಿಯ ಅಗ್ನಿಪಥ್ ಯೋಜನೆಗೆ ಸೇರಲು ಆಸಕ್ತರು ಪಿಯುಸಿಯಲ್ಲೇ ಶಿಕ್ಷಣ ತೊರೆಯಬೇಕಾಗುತ್ತದೆ. ತಮ್ಮ ಸರಕಾರದಲ್ಲಿ ಯುವ ಜನರಿಗೆ ಶಿಕ್ಷಣ, ಉದ್ಯೋಗ ಒದಗಿಸಲಾಗದ ಬಿಜೆಪಿ ಶಾಸಕರು, ಮುಖಂಡರು ತಮ್ಮ ಕಚೇರಿಗಳಲ್ಲಿ ಅಗ್ನಿಪಥ್ ಯೋಜನೆಯ ನೋಂದಣಿ ಅಭಿಯಾನ ನಡೆಸಿ ಉದ್ಯೋಗ, ದೇಶಭಕ್ತಿಯ ಹೆಸರಿನಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಅಗ್ನಿಪಥ್‌ಗೆ ಯುವಜನರನ್ನು ಸೇರಿಸಲು ಅಭಿಯಾನ ನಡೆಸುತ್ತಿರುವ ಶಾಸಕ ರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತಿತರರು ಮೊದಲು ತಮ್ಮ ಕುಟುಂಬದ ಹದಿಹರೆಯದ ಯುವಕರ ಶಿಕ್ಷಣ ಮೊಟಕುಗೊಳಿಸಿ ಅಗ್ನಿವೀರರಾಗಿ ಕಳುಹಿಸಿಕೊಡಲಿ ಎಂದು ಸವಾಲು ಹಾಕಿದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ವಸಂತ ಅಚಾರಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಸುಕುಮಾರ್ ಮಾತನಾಡಿದರು.
ಸಿಪಿಎಂ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಪದ್ಮಾವತಿ ಶೆಟ್ಟಿ, ಕೃಷ್ಣಪ್ಪಸಾಲ್ಯಾನ್, ಯೋಗೀಶ್ ಜಪ್ಪಿನಮೊಗರು, ವಸಂತಿ ಕುಪ್ಪೆಪದವು, ಜಯಂತ ನಾಯಕ್, ಸಂತೋಷ್ ಬಜಾಲ್, ಜಯಂತಿ ಶೆಟ್ಟಿ, ಬಶೀರ್ ಪಂಜಿಮೊಗರು, ಬಿ.ಕೆ.ಇಮ್ತಿಯಾಝ್, ಮನೋಜ್ ವಾಮಂಜೂರು, ದಯಾನಂದ ಶೆಟ್ಟಿ, ಶೇಖರ್ ಕುಂದರ್, ನವೀನ್ ಕೊಂಚಾಡಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.









