ಜು.17: ಅಮೆಚೂರ್ ಕುಸ್ತಿ ಸಂಘದಿಂದ ಕುಸ್ತಿ ಸ್ಪರ್ಧೆ
ಮಂಗಳೂರು, ಜು.೧೧: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕುಸ್ತಿ ಸಂಘದ ವತಿಯಿಂದ ೪೮ನೇ ವರ್ಷದ ಕುಸ್ತಿ ಸ್ಪರ್ಧೆಯು ಜು.೧೭ರಂದು ನಗರದ ಲಾಲ್‌ಭಾಗ್ ಬಳಿಯ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಎಂ.ಸುರೇಶ್ಚಂದ್ರ ಶೆಟ್ಟಿ ತಿಳಿಸಿದರು.
ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ ೧೦ಕ್ಕೆ ಪಂದ್ಯಾಟ ಉದ್ಘಾಟನೆಗೊಳ್ಳಲಿದ್ದು, ಸಂಜೆ ೬:೩೦ಕ್ಕೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಜು.೧೬ರಂದು ಮಧ್ಯಾಹ್ನ ೩ರಿಂದ ಕ್ರೀಡಾಂಗಣದಲ್ಲಿ ದೇಹ ತೂಕ ತಪಾಸಣೆ ನಡೆಯಲಿದೆ ಎಂದರು.
ಸಂಘದ ಕಾರ್ಯದರ್ಶಿ ಜೀಶನ್ ಆಲಿ ಮಾತನಾಡಿ ಎರಡು ವರ್ಷಗಳ ಬಳಿಕ ಪಂದ್ಯಾಟ ನಡೆಯುತ್ತಿದ್ದು, ಸುಮಾರು ೧೫೦-೨೦೦ ಮಂದಿ ಕುಸ್ತಿ ಪಟುಗಳು ಭಾಗವಹಿಸುವ ನಿರೀಕ್ಷೆಯಿದೆ ೭೪ಕೆ.ಜಿ. ವಿಭಾಗದಲ್ಲಿ ‘ತುಳುನಾಡ ಕೇಸರಿ’ ೨೦೨೨, ೬೧ಕೆ.ಜಿ ವಿಭಾಗದಲ್ಲಿ ‘ತುಳುನಾಡ ಕುಮಾರ‘ ೨೦೨೨, ೧೬ವರ್ಷದ ಒಳಗಿನವರಿಗೆ ೩೫ ಕೆ.ಜಿ.ವಿಭಾಗದಲ್ಲಿ ‘ಮಾಸ್ಟರ್ ಶಿವಾಜಿ ೨೦೨೨’ ಮತ್ತು ೧೫ ವರ್ಷದ ಒಳಗಿನವರಿಗೆ ೩೦ ಕೆ.ಜಿ.ವಿಭಾಗದಲ್ಲಿ ‘ಮಾಸ್ಟರ್ ಸುಲ್ತಾನ್ ೨೦೨೨’ ಸ್ಪರ್ಧೆ ನಡೆಯಲಿದೆ. ೪೮ ಕೆ.ಜಿ.ವಿಭಾಗದಲ್ಲಿ ‘ತುಳುನಾಡ ಕುವರಿ’ ಬಿರುದಿಗಾಗಿ ಮಹಿಳಾ ಸ್ಪರ್ಧೆ ನಡೆಯಲಿದೆ. ಉಳಿದಂತೆ ಪುರುಷ, ಮಹಿಳೆಯರ ಮತ್ತು ಶಾಲಾ ಮಕ್ಕಳ ಕುಸ್ತಿ ಸ್ಪರ್ಧೆ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ದೊರೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸುಖಪಾಲ್ ಸಾಲ್ಯಾನ್, ಉಪಾಧ್ಯಕ್ಷ ಯುವರಾಜ್ ಪುತ್ರನ್, ಸದಸ್ಯ ಶರತ್ ಅಮೀನ್ ಉಪಸ್ಥಿತರಿದ್ದರು.