ಕೊಚ್ಚಿಹೋದ ಕಲ್ಮಕ್ಕಿ ರಸ್ತೆ: ಹಲವು ಮನೆಗಳಿಗೆ ಸಂಪರ್ಕ ಕಡಿತ

ಬೈಂದೂರು: ಕೆಲವು ದಿನಗಳಿಂದ ನಿರಂತವಾಗಿ ಸುರಿಯುತ್ತಿ ರುವ ಭಾರೀ ಮಳೆಯಿಂದಾಗಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೂರಕುಂದ ಸಮೀಪದ ಕಲ್ಮಕ್ಕಿ ಎಂಬಲ್ಲಿ ರಸ್ತೆಗೆ ಅಳವಡಿಸಿದ್ದ ಮೋರಿ ಕುಸಿದು ಸಂಪರ್ಕ ರಸ್ತೆ ಹೊಳೆಯ ಪಾಲಾಗಿದೆ. ಇದರಿಂದ ಹಲವು ಮನೆಗಳು ಸಂಪರ್ಕ ಕಳೆದುಕೊಂಡಿವೆ.
ಈ ಪ್ರದೇಶದಲ್ಲಿ ಕೃಷಿ ಹಾಗೂ ಹೈನುಗಾರಿಕೆ ನೆಚ್ಚಿಕೊಂಡ ೩೦ಕ್ಕೂ ಅಧಿಕ ಮನೆಗಳಿದ್ದು ರಸ್ತೆ ಸಂಪರ್ಕವಿಲ್ಲದ್ದ ರಿಂದ ಸೋಮವಾರ ಹಲವು ಲೀಟರ್ ಹಾಲು ಡೈರಿಗೆ ನೀಡಲು ಸಾಧ್ಯವಾಗದೆ ಹಾಳಾಗಿರುವ ಬಗ್ಗೆ ವರದಿಯಾ ಗಿದೆ. ಅದೇ ರೀತಿ ಇಲ್ಲಿ ಎರಡು ಗ್ರಾಮಗಳ ನಡುವಿನ ಸಂಪರ್ಕವೂ ಇಲ್ಲದಂತಾಗಿದೆ. ರಸ್ತೆ ಮೋರಿ ಕುಸಿತದಿಂದ ಬೃಹತ್ ಗಾತ್ರದ ಕಂದಕವೇ ನಿರ್ಮಾಣವಾಗಿದೆ.
ಸ್ಥಳಕ್ಕೆ ಬೈಂದೂರಿನ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಆಗಮಿಸಿ ಸ್ಥಳೀಯರ ಸಮಸ್ಯೆ ಆಲಿಸಿದರು. ಪಟ್ಟಣ ಪಂಚಾಯತ್ ಇಂಜಿನಿಯರ್ ಅವರಲ್ಲಿ ಅಂದಾಜು ಪಟ್ಟಿ ಸಿದ್ದಪಡಿಸಲು ಸೂಚಿಸಿದ್ದು ತಕ್ಷಣಕ್ಕೆ ತುರ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶಂಕರ್ ಪೂಜಾರಿ, ಸುಕುಮಾರ್ ಸುರ್ಕುಂದ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ಜೈಸನ್ ಮದ್ದೋಡಿ, ಸಮಾಜ ಸೇವಕ ಸುಬ್ರಮಣ್ಯ ಬಿಜೂರ್, ರಾಜೇಶ್ ಬಡಾಕೆರೆ ಮೊದಲಾದವರು ಉಪಸ್ಥಿತರಿದ್ದರು.







